ಗಾಝಾದಲ್ಲಿ ಯುದ್ಧ ವಿರಾಮಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು: ಫಾರ್ಮುಲಾ ಒನ್ ಚಾಂಪಿಯನ್ ಲೂವಿಸ್ ಹ್ಯಾಮಿಲ್ಟನ್
PC: x.com/GlobalUpdates24
ಬ್ರಿಟನ್: ಜಾಗತಿಕ ಮಾನವೀಯತೆ ಸಮಸ್ಯೆಗಳ ಬಗ್ಗೆ ಮತ್ತೆ ಧ್ವನಿ ಎತ್ತಿರುವ ಏಳು ಬಾರಿಯ ಫಾರ್ಮುಲಾ 1 ವಿಶ್ವ ಚಾಂಪಿಯನ್ ಲೂವಿಸ್ ಹ್ಯಾಮಿಲ್ಟನ್, ಗಾಝಾದಲ್ಲಿ ಹೆಚ್ಚುತ್ತಿರುವ ಸಂಘರ್ಷ ಬಗ್ಗೆ ಮತ್ತು ಯುದ್ಧಪೀಡಿತ ಪ್ರದೇಶದಲ್ಲಿ ಮಕ್ಕಳು ಹಸಿವಿನಿಂದ ಸಾಯುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಬ್ರಿಟನ್ ಚಾಂಪಿಯನ್, ವಾರಾಂತ್ಯದಲ್ಲಿ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ ಗೆ ಮುನ್ನ ಯುನಿಸೆಫ್ ಮಾಡಿರುವ ಪೋಸ್ಟನ್ನು ಶೇರ್ ಮಾಡಿದ್ದಾರೆ. ಗಾಝಾದಲ್ಲಿ ಕದನ ವಿರಾಮಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿರುವ ಅವರು, ಗಾಝಾಕ್ಕೆ ಮಾನವೀಯ ನೆರವು ಲಭ್ಯವಾಗುವಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. "ನಾವು ಇನ್ನು ಮುಂದೆ ಮೌನವಾಗಿ ಇರುವಂತಿಲ್ಲ" ಎಂದು ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹೇಳಿದ್ದಾರೆ.
"ಜುಲೈ ಮೊದಲ ವಾರದಲ್ಲಿ ಗಾಝಾದಲ್ಲಿ ನಡೆದ ತೀವ್ರ ದಾಳಿಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆರಂಭದ ದಿನದಿಂದಲೂ ಮಕ್ಕಳ ಸಾವು ಮುಂದುವರಿದಿದೆ. ತಕ್ಷಣ ಯುದ್ಧವಿರಾಮ ಆಗಲಿ" ಎಂದು ಕರೆ ನೀಡಿದ್ದಾರೆ.
"ಗಾಝಾದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿದರೆ ಆಗಿರುವ ಒಟ್ಟು ಹಾನಿಯ ಕುರಿತು ಹೇಳಲು ಪದಗಳೇ ಸಿಗುತ್ತಿಲ್ಲ. ಮಾನವೀಯ ಸಂಘಟನೆಗಳು ಮನುಷ್ಯನ ಅಗತ್ಯಗಳಾದ ಆಹಾರ, ಶುದ್ಧ ನೀರು, ವೈದ್ಯಕೀಯ ಸೌಲಭ್ಯಗಳನ್ನು ಸುರಕ್ಷಿತವಾಗಿ ಜನರಿಗೆ ಒದಗಿಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ" ಎಂದು ಅವರು ವಿಶ್ಲೇಷಿಸಿದ್ದಾರೆ.