×
Ad

ಮೊದಲ ಬಾರಿಗೆ ತಾಲಿಬಾನ್ ಸಚಿವರಿಗೆ ಭಾರತ ಆತಿಥ್ಯ!

Update: 2025-10-03 07:44 IST

PC | timesofindia

ಹೊಸದಿಲ್ಲಿ: ಕಳೆದ ಕೆಲ ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ನೀಡುತ್ತಿದ್ದ ಭಾರತ ಇದೇ ಮೊದಲ ಬಾರಿಗೆ ದೇಶದ ಜತೆಗಿನ ಸಂಬಂಧ ಬಲಗೊಳಿಸಲು ನಿರ್ಧರಿಸಿದೆ. ತಾಲಿಬಾನ್ ಸರ್ಕಾರದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅಮೀರ್ ಖಾನ್ ಮುತ್ತಖಿ ಈ ತಿಂಗಳ 9ರಂದು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.

ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರನ್ನು ಮುತ್ತಖಿ ಭೇಟಿಯಾಗಲಿದ್ದು, 2021ರಲ್ಲಿ ತಾಲಿಬಾನ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಭಾರತಕ್ಕೆ ಉನ್ನತ ಮಟ್ಟದ ತಾಲಿಬಾನ್ ಮುಖಂಡರು ಆಗಮಿಸುತ್ತಿರುವುದು ಇದೇ ಮೊದಲು.

ಕಳೆದ ಆಗಸ್ಟ್ ನಿಂದ ಮುತ್ತಖಿ ಭೇಟಿ ಸಂಬಂಧ ಭಾರತದ ಜತೆ ಮಾತುಕತೆ ನಡೆಯುತ್ತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತ್ತಕಿಯವರಿಗೆ ಪ್ರಯಾಣ ನಿಷೇಧ ಹೇರಿದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಈ ನಿಷೇಧ ರದ್ದುಪಡಿಸುವಂತೆ ಭಾರತ ಮನವಿ ಮಾಡಿಕೊಂಡಿದ್ದು, ಇದಕ್ಕೆ ಒಪ್ಪಿಗೆ ದೊರಕಿದೆ ಎನ್ನಲಾಗಿದೆ. ಆ ಬಳಿಕ ಕೇಂದ್ರ ಸರ್ಕಾರ ದಿನಾಂಕವನ್ನು ನಿಗದಿಪಡಿಸಲು ಸಾಧ್ಯವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ತಾಲಿಬಾನ್ ಸರ್ಕಾರಕ್ಕೆ ಭಾರತ ಇನ್ನೂ ಅಧಿಕೃತವಾಗಿ ಮಾನ್ಯತೆ ನೀಡದೇ ಇದ್ದರೂ, ಅಲ್ಲಿನ ಸಚಿವರ ಭೇಟಿ ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಯಲ್ಲಿ ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಹೇಳಲಾಗಿದೆ.

ಕಳೆದ ಜನವರಿಯಲ್ಲಿ ದುಬೈನಲ್ಲಿ ಮುತ್ತಖಿ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನಡುವೆ ನಡೆದ ಮಾತುಕತೆಯ ವೇಳೆ ಉಭಯ ದೇಶಗಳ ನಡುವೆ ಪರಸ್ಪರ ಸಹಕಾರದ ಸಂಬಂಧ ವೃದ್ಧಿಪಡಿಸುವ ನಿರ್ಧಾರಕ್ಕೆ ಬರಲಾಗಿದೆ. ಬಳಿಕ ಉಭಯ ದೇಶಗಳ ವಿದೇಶಾಂಗ ಸಚಿವರು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News