"ಭಾರತ-ಪಾಕಿಸ್ತಾನದ ಇಬ್ಬರು ನಾಯಕರು ಕದನ ವಿರಾಮಕ್ಕೆ ನಿರ್ಧರಿಸಿದ್ದರು": ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (PTI)
ನ್ಯೂಯಾರ್ಕ್ : ಭಾರತ- ಪಾಕ್ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನದ ಇಬ್ಬರು ಅತ್ಯಂತ ಬುದ್ಧಿವಂತ ನಾಯಕರು ಪರಮಾಣು ಯುದ್ಧಕ್ಕೆ ತಿರುಗಬಹುದಾದ ಯುದ್ಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.
ಮೇ.10ರಂದು ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಲು ನಿರ್ಧರಿಸಿದ ನಂತರ ಭಾರತ- ಪಾಕ್ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಡೊನಾಲ್ಡ್ ಟ್ರಂಪ್ ತನ್ನನ್ನು ತಾನು ಪ್ರಶಂಸಿಸಿಕೊಳ್ಳುತ್ತಿದ್ದರು.
ಬುಧವಾರ ಶ್ವೇತಭವನದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಆತಿಥ್ಯ ನೀಡಿದ ನಂತರ ಓವಲ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಮುನೀರ್ ಅವರನ್ನು ಭೇಟಿ ಮಾಡಿರುವುದರಲ್ಲಿ ನನಗೆ ಹೆಮ್ಮೆಯಿದೆ ಎಂದು ಹೇಳಿದರು.
ನಾನು ಅವರನ್ನು ಇಲ್ಲಿ ಭೇಟಿ ಮಾಡಲು ಕಾರಣ ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮಗೆ ತಿಳಿದಿರುವಂತೆ ಭಾರತದ ಪ್ರಧಾನಿ ಮೋದಿ ಇತ್ತೀಚೆಗೆ ನಿರ್ಗಮಿಸಿದ್ದರು. ನಾವು ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಜೊತೆಗೂ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ʼನಾನು ಕೆಲವು ವಾರಗಳ ಹಿಂದೆ ಮೋದಿ ಜೊತೆಗೆ ಮಾತುಕತೆ ನಡೆಸಿದ್ದೆ, ಅವರು ಅಮೆರಿಕಗೆ ಬಂದಿದ್ದರು. ಇಬ್ಬರೂ ಬುದ್ಧಿವಂತ ಜನರು, ಜೊತೆಗೆ ಅವರ ಸಿಬ್ಬಂದಿಯೂ ಬುದ್ದಿವಂತರು, ಆ ಯುದ್ಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅದು ಪರಮಾಣು ಯುದ್ಧವಾಗಿರಬಹುದು. ಅವು ಎರಡು ದೊಡ್ಡ ಪ್ರಮಾಣದ ಪರಮಾಣು ಶಕ್ತಿ ಇರುವ ರಾಷ್ಟ್ರಗಳು. ಅವರು ಯುದ್ಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದರುʼ ಎಂದು ಟ್ರಂಪ್ ಹೇಳಿದರು.