×
Ad

ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಒಪ್ಪಿದೆ : ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

Update: 2025-10-18 10:29 IST

Photo: Reuters

ವಾಷಿಂಗ್ಟನ್‌: ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದು, ಈ ಹೇಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಳ್ಳಿಹಾಕಿದೆ.

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಭೇಟಿಯ ವೇಳೆ ಮಾತನಾಡಿದ ಟ್ರಂಪ್, “ಭಾರತ ಈಗಾಗಲೇ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿದೆ ಮತ್ತು ಶೀಘ್ರದಲ್ಲೇ ಸಂಪೂರ್ಣವಾಗಿ ನಿಲ್ಲಿಸಲಿದೆ,” ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬುಧವಾರ ದೂರವಾಣಿ ಸಂಭಾಷಣೆ ನಡೆಸಿದ ವೇಳೆ ಭಾರತವು ರಷ್ಯಾದಿಂದ ತೈಲ ಆಮದು ನಿಲ್ಲಿಸುವ ಕುರಿತು ಭರವಸೆ ನೀಡಿದೆಯೆಂದು ಅವರು ತಿಳಿಸಿದ್ದಾರೆ.

“ಇದು ರಷ್ಯಾದಿಂದ ದೂರ ಸರಿಯುವ ನಿಟ್ಟಿನಲ್ಲಿ ಭಾರತದ ಮಹತ್ವದ ಹೆಜ್ಜೆ,” ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ.

ಆದರೆ, ಈ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, “ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್, ಭಾರತವು ನಿರಂತರವಾಗಿ ರಷ್ಯಾದ ಕಚ್ಚಾ ತೈಲ ಆಮದುಗಳ ಮೂಲಕ ಉಕ್ರೇನ್ ಯುದ್ಧಕ್ಕೆ ಹಣಕಾಸು ನೆರವಾಗುತ್ತಿದೆ ಎಂದು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದರು. ಅವರು ಪ್ರಧಾನಿ ಮೋದಿಯನ್ನು “ಆಪ್ತ ಸ್ನೇಹಿತ” ಹಾಗೂ “ವಿಶ್ವಾಸಾರ್ಹ ಪಾಲುದಾರ” ಎಂದರು.

ಹಂಗೇರಿ ರಷ್ಯಾದಿಂದ ತೈಲ ಆಮದು ಮುಂದುವರಿಸಿರುವುದಕ್ಕೆ ಟ್ರಂಪ್ ಸಹಾನುಭೂತಿ ವ್ಯಕ್ತಪಡಿಸಿ, “ಹಂಗೇರಿ ಒಳನಾಡಿನ ರಾಷ್ಟ್ರವಾಗಿದೆ; ಅವರಿಗೆ ಸಮುದ್ರ ಮಾರ್ಗವಿಲ್ಲ. ಪೈಪ್‌ಲೈನ್‌ನಿಂದ ತೈಲ ಪಡೆಯುವುದು ಅವರಿಗಿರುವ ಏಕೈಕ ಆಯ್ಕೆ,” ಎಂದು ಹೇಳಿದರು.

ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಶೀಘ್ರದಲ್ಲೇ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಶೃಂಗಸಭೆ ನಡೆಯಲಿದ್ದು, ಉಕ್ರೇನ್ ಯುದ್ಧದ ಅಂತ್ಯಗೊಳಿಸುವ ಪ್ರಯತ್ನ ಈ ಸಭೆಯ ಪ್ರಮುಖ ಉದ್ದೇಶವಾಗಲಿದೆ ಎಂದು ಟ್ರಂಪ್ ಹೇಳಿದರು.

ಹಂಗೇರಿಯ ಪ್ರಧಾನ ಮಂತ್ರಿ ವಿಕ್ಟರ್ ಓರ್ಬನ್ ಅವರನ್ನು “ಅತ್ಯುತ್ತಮ ನಾಯಕ” ಎಂದು ಶ್ಲಾಘಿಸಿದ ಟ್ರಂಪ್, “ಪುಟಿನ್ ಮತ್ತು ನಾನು ಇಬ್ಬರೂ ಓರ್ಬನ್ ಅವರನ್ನು ಗೌರವಿಸುತ್ತೇವೆ. ಅದಕ್ಕಾಗಿ ಬುಡಾಪೆಸ್ಟ್ ಅನ್ನು ಶೃಂಗಸಭೆಗೆ ಆಯ್ಕೆ ಮಾಡಲಾಗಿದೆ,” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News