ಅಫ್ಘಾನ್ ಮೇಲಿನ ಪಾಕಿಸ್ತಾನದ ಗಡಿಯಾಚೆಗಿನ ದಾಳಿಗೆ ಭದ್ರತಾ ಮಂಡಳಿಯಲ್ಲಿ ಭಾರತದ ಖಂಡನೆ
Photo: NDTV
ವಿಶ್ವಸಂಸ್ಥೆ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಬಲವಾಗಿ ಖಂಡಿಸಿದ್ದು ಪಾಕಿಸ್ತಾನ `ನಕಲಿ ಮುಸ್ಲಿಮ್ ಸಹೋದರತ್ವ'ದ ಬೂಟಾಟಿಕೆ ಪ್ರದರ್ಶಿಸಿದೆ ಎಂದು ಟೀಕಿಸಿದೆ.
ಅಫ್ಘಾನಿಸ್ತಾನ ಕುರಿತು ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ` ಪವಿತ್ರ ರಮಝಾನ್ ತಿಂಗಳಿನಲ್ಲಿ ನಿರ್ದಯವಾಗಿ ವಾಯುದಾಳಿಗಳನ್ನು ನಡೆಸುತ್ತಿರುವಾಗ, ಒಂದು ಕಡೆ ಅಂತಾರಾಷ್ಟ್ರೀಯ ಕಾನೂನು ಮತ್ತು ಇಸ್ಲಾಮಿಕ್ ಒಗ್ಗಟ್ಟಿನ ಉನ್ನತ ತತ್ವಗಳನ್ನು ಪ್ರತಿಪಾದಿಸುವುದು ಬೂಟಾಟಿಕೆಯಾಗಿದೆ' ಎಂದು ಟೀಕಿಸಿದರು.
ಗಡಿಯಾಚೆಗಿನ ಹಿಂಸಾಚಾರದಿಂದ ಉಂಟಾದ ನಾಗರಿಕ ಸಾವು-ನೋವುಗಳ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಕಳವಳವನ್ನು ಪುನರುಚ್ಚರಿಸಿದ ಹರೀಶ್, ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆ ಚಾರ್ಟರ್(ಸನದು) ಮತ್ತು ದೇಶದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿರುವ ವಾಯುದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದರು. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಾಮೂಹಿಕ ಜಾಗತಿಕ ಕ್ರಮಕ್ಕೆ ಕರೆ ನೀಡಿದ ಅವರು, ಅಂತರರಾಷ್ಟ್ರೀಯ ಸಮುದಾಯದ ಸಂಘಟಿತ ಪ್ರಯತ್ನಗಳು ಮಾತ್ರ ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವವರು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗುವುದಿಲ್ಲ ಎಂದು ಖಚಿತಪಡಿಸುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ.