Fact Check |ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ಗಾಯಗೊಂಡಿಲ್ಲ; ಪ್ರಧಾನಿ ನೆತನ್ಯಾಹು ಸಹೋದರ ಇಡ್ಡೊ ನೆತನ್ಯಾಹು ಸಾವನ್ನಪ್ಪಿಲ್ಲ
ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ (Photo:X/@itamarbengvir)
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯ ಹರಡುವಿಕೆ ಹೆಚ್ಚಾಗಿದೆ. ಪರಿಶೀಲಿಸದ ಹೇಳಿಕೆಗಳು ಹಾಗೂ ವಿಡಿಯೋ ಕ್ಲಿಪ್ ಗಳು ವೈರಲ್ ಆಗಿದ್ದು, ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹೋದರ ಇಡ್ಡೊ ನೆತನ್ಯಾಹು ಕುರಿತು ಇತ್ತೀಚೆಗೆ ಹಲವು ವದಂತಿಗಳು ವೈರಲ್ ಆಗಿವೆ.
ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಲ್ಲಿ ಇರಾನ್ ನಡೆಸಿದ ವಾಯುದಾಳಿಯಲ್ಲಿ ಇಡ್ಡೊ ನೆತನ್ಯಾಹು ಸಾವನ್ನಪ್ಪಿದ್ದಾರೆ ಹಾಗೂ ಇಟಾಮರ್ ಬೆನ್-ಗ್ವಿರ್ ಅವರ ನಿವಾಸಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅವರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿವೆ.
ಆದರೆ ಈ ಹೇಳಿಕೆಗಳು ಸುಳ್ಳು ಎಂದು Fact Check ನಿಂದ ತಿಳಿದುಬಂದಿದೆ. ಟೆಲ್ ಅವೀವ್ ನಲ್ಲಿರುವ ಇಟಾಮರ್ ಬೆನ್-ಗ್ವಿರ್ ಅವರ ನಿವಾಸವನ್ನು ವಾಯುದಾಳಿಯಲ್ಲಿ ಗುರಿಯಾಗಿಸಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಅಥವಾ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಅದೇ ರೀತಿ ಇಡ್ಡೊ ನೆತನ್ಯಾಹು ಮೇಲೆ ದಾಳಿ ನಡೆದಿರುವುದು ಅಥವಾ ಅವರು ಸಾವನ್ನಪ್ಪಿದ್ದಾರೆ ಎಂಬುದಕ್ಕೂ ಯಾವುದೇ ದೃಢೀಕರಣ ಇಲ್ಲ. ಅವರು ಗಾಯಗೊಂಡಿದ್ದಾರೆ ಎಂಬ ಹೇಳಿಕೆಗಳೂ ಸುಳ್ಳಾಗಿವೆ ಎಂದು ವರದಿಗಳು ಸ್ಪಷ್ಟಪಡಿಸಿವೆ.
ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಮತ್ತೊಂದು ಆರೋಪವನ್ನೂ ಮಾಡಿವೆ. ಇರಾನಿನ ವಾಯುದಾಳಿಯಿಂದ ಉಂಟಾದ ಗಾಯವನ್ನು ಮರೆಮಾಡಲು ಇಸ್ರೇಲಿ ಮಾಧ್ಯಮಗಳು ಬೆನ್-ಗ್ವಿರ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಸುಳ್ಳು ವರದಿ ಮಾಡುತ್ತಿವೆ ಎಂದು ಅವು ಹೇಳುತ್ತವೆ. ಆದರೆ ಇತ್ತೀಚೆಗೆ ಇಂತಹ ಯಾವುದೇ ಘಟನೆ ಸಂಭವಿಸಿದೆ ಎಂಬ ದಾಖಲೆಗಳು ಲಭ್ಯವಾಗಿಲ್ಲ.
ಆದರೆ ಎಪ್ರಿಲ್ 2024ರಲ್ಲಿ ಇಸ್ರೇಲ್‌ನ ರಾಮ್ಲೆ ನಗರದಲ್ಲಿ ಬೆನ್-ಗ್ವಿರ್ ಕಾರು ಅಪಘಾತದಲ್ಲಿ ಭಾಗಿಯಾಗಿದ್ದ ಘಟನೆ ನಡೆದಿತ್ತು. ಅವರು ಪ್ರಯಾಣಿಸುತ್ತಿದ್ದ ವಾಹನವು ರೆಡ್ ಲೈಟ್ ಮೀರಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎಸ್‌ಯುವಿ ಪಲ್ಟಿಯಾಗಿತ್ತು. ಈ ಘಟನೆಯಲ್ಲಿ ಬೆನ್-ಗ್ವಿರ್, ಅವರ ಮಗಳು ಹಾಗೂ ವಾಹನದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಆಗ ವರದಿಯಾಗಿತ್ತು. ಆದರೆ ವೈರಲ್ ಪೋಸ್ಟ್ ಗಳು ಹೇಳುವಂತೆ ಇತ್ತೀಚೆಗೆ 49 ವರ್ಷದ ಬೆನ್-ಗ್ವಿರ್ ಯಾವುದೇ ಹೊಸ ಕಾರು ಅಪಘಾತವಾಗಿಲ್ಲ.
ಇರಾನ್ ನ ವಾಯುದಾಳಿಗಳ ಕುರಿತು ವರದಿಗಳ ಪ್ರಕಾರ, ಯುಎಸ್–ಇಸ್ರೇಲ್ ಸಂಯುಕ್ತ ವಾಯುದಾಳಿಯಲ್ಲಿ ಆಯತೊಲ್ಲಾ ಅಲಿ ಖಾಮಿನೈ ಹತ್ಯೆಯಾದ ಬಳಿಕ ಫೆಬ್ರವರಿ 28ರಿಂದ ಮಾರ್ಚ್ 4ರವರೆಗೆ ಇಸ್ರೇಲ್ ಮೇಲೆ ಇರಾನ್ ಹಲವು ದಾಳಿ ಪ್ರಯತ್ನಗಳನ್ನು ನಡೆಸಿದೆ.
ಈ ಅವಧಿಯಲ್ಲಿ ಇಸ್ರೇಲ್ ವಿರುದ್ಧ ಇರಾನ್ ನಡೆಸಿದ 90 ಕ್ಕೂ ಹೆಚ್ಚು ದಾಳಿ ಪ್ರಯತ್ನಗಳನ್ನು ಎಸಿಎಲ್‌ಇಡಿ (ACLED) ದತ್ತಾಂಶ ದಾಖಲಿಸಿದೆ. ಸುಮಾರು 20 ನಾಗರಿಕ ಪ್ರದೇಶಗಳು ಹಾನಿಗೊಳಗಾಗಿದ್ದು ಕನಿಷ್ಠ 10 ಸಾವುಗಳು ಸಂಭವಿಸಿರುವುದಾಗಿ ವರದಿಯಾಗಿದೆ.
ಇದೇ ವೇಳೆ, ಇರಾನ್ ಗೆ ಹತ್ತಿರವಾಗಿದೆ ಎಂದು ಹೇಳಲಾಗುವ ಫಾರ್ಸ್ ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, 500 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 2000 ಕ್ಕೂ ಹೆಚ್ಚು ಡ್ರೋನ್ ಗಳನ್ನು ಹಾರಿಸಲಾಗಿದೆ. ಅವುಗಳಲ್ಲಿ ಸುಮಾರು 40 ಶೇಕಡಾ ಇಸ್ರೇಲ್ ಅನ್ನು ಗುರಿಯಾಗಿಸಿದ್ದರೆ, ಉಳಿದವು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿದ್ದವು ಎಂದು ತಿಳಿಸಲಾಗಿದೆ.
ಒಟ್ಟಿನಲ್ಲಿ, ಇಟಾಮರ್ ಬೆನ್-ಗ್ವಿರ್ ಗಾಯಗೊಂಡಿದ್ದಾರೆ ಅಥವಾ ಇಡ್ಡೊ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ವೈರಲ್ ಹೇಳಿಕೆಗಳಿಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಮಾಹಿತಿಗಳು ತಪ್ಪು ವದಂತಿಗಳಾಗಿವೆ ಎಂದು Fact check ಸ್ಪಷ್ಟಪಡಿಸಿದೆ.