×
Ad

ಇಂಧನ ಕೇಂದ್ರವಾಗಿ ಶ್ರೀಲಂಕಾದ ಅಭಿವೃದ್ಧಿಗೆ ಭಾರತ, ಯುಎಇ ನೆರವು

Update: 2025-04-05 21:37 IST

 ನರೇಂದ್ರ ಮೋದಿ , ಅನುರಾ ಕುಮಾರ ದಿಸ್ಸಾನಾಯಕೆ | PC : PTI 

ಕೊಲಂಬೊ: ಭಾರತ ಹಾಗೂ ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ವು ಶ್ರೀಲಂಕಾವನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಿಕೊಂಡಿದೆಯೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.

ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ ಚೀನಾದ ಜೊತೆ ಭಾರತದ ಪೈಪೋಟಿ ಹೆಚ್ಚುತ್ತಿರುವ ನಡುವೆಯೇ ಈ ಬೆಳವಣಿಗೆಯುಂಟಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಶ್ರೀಲಂಕಾ ಭೇಟಿಯ ಸಂದರ್ಭ ಕೊಲಂಬೊದಲ್ಲಿ ಈ ಮೂರು ರಾಷ್ಟ್ರಗಳ ನಡುವೆ ಒಪ್ಪಂದವೇರ್ಪಟ್ಟಿದೆ. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ಸೆಪ್ಟೆಂಬರ್‌ ನಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ದ್ವೀಪರಾಷ್ಟ್ರಕ್ಕೆ ಮೋದಿ ಅವರ ಚೊಚ್ಚಲ ಭೇಟಿ ಇದಾಗಿದೆ.

ಶ್ರೀಲಂಕಾದ ಬಂದರು ನಗರ ಹಂಬನ್‌ತೋಟಾದಲ್ಲಿ 3.2 ಶತಕೋಟಿ ಡಾಲರ್ ಮೌಲ್ಯದ ತೈಲ ಸಂಸ್ಕರಣಾಗಾರವನ್ನು ನಿರ್ಮಿಸುವ ಒಪ್ಪಂದಕ್ಕೆ ಭಾರತ, ಯುಎಇ ಹಾಗೂ ಶ್ರೀಲಂಕಾ ಸಹಿ ಹಾಕಿವೆ.

ಶ್ರೀಲಂಕಾದಲ್ಲಿ ಪ್ರಧಾನಿ ಮೋದಿಯವರು ‘ಸಿಲೋನ್ ವಿದ್ಯುತ್ ನಿಗಮ ’ ಹಾಗೂ ಭಾರತದ ‘ರಾಷ್ಟ್ರೀಯ ಉಷ್ಣವಿದ್ಯುತ್ ಕಾರ್ಪೊರೇಶನ್’ನ ಜಂಟಿ ಸಹಭಾಗಿತ್ವದ 100 ದಶಲಕ್ಷ ಡಾಲರ್‌ಗಳ ಸೌರ ವಿದ್ಯುತ್ ಯೋಜನೆಯನ್ನು ಉದ್ಘಾಟಿಸಿದರು.

ಭಾರತ ಹಾಗೂ ಶ್ರೀಲಂಕಾ ದೇಶಗಳು ಸಾಲ ಪುನಾರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆಯೆಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಮಿಸ್ರಿ ತಿಳಿಸಿದ್ದಾರೆ. ಶ್ರೀಲಂಕಾವು ಭಾರತದ ಎಕ್ಸಿಮ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್‌ ನಲ್ಲಿ ಹೊಂದಿದ್ದ 1.36 ಶತಕೋಟಿ ಡಾಲರ್ ಸಾಲದ ಪುನಾರಚನೆ ಪ್ರಕ್ರಿಯೆಯನ್ನು ಭಾರತ ಹಾಗೂ ಶ್ರೀಲಂಕಾ ಪೂರ್ತಿಗೊಳಿಸಿರುವುದಾಗಿ ಶ್ರೀಲಂಕಾ ವಿತ್ತ ಸಚಿವಾಲಯದ ದತ್ತಾಂಶಗಳು ತಿಳಿಸಿವೆ.

ವಿದ್ಯುತ್ ಗ್ರಿಡ್ ಸಂಪರ್ಕ, ಡಿಜಿಟಲೀಕರಣ, ಭದ್ರತೆ ಹಾಗೂ ಆರೋಗ್ಯಪಾಲನೆ ಕುರಿತಾಗಿಯೂ ಭಾರತ ಹಾಗೂ ಶ್ರೀಲಂಕಾ ದೇಶಗಳು ಒಪ್ಪಂದಗಳಿಗೆ ಸಹಿ ಹಾಕಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News