ಕೆನಡಾದಲ್ಲಿ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿನಿ ಮೃತ್ಯು
ಸಾಂದರ್ಭಿಕ ಚಿತ್ರ (PTI)
ಒಂಟಾರಿಯೊ: ಕೆನಡಾದ ಹ್ಯಾಮಿಲ್ಟನ್‌ನ ಒಂಟಾರಿಯೊ ಪಟ್ಟಣದಲ್ಲಿ ಭಾರತೀಯ ವಿದ್ಯಾರ್ಥಿನಿಯೋರ್ವಳು ಗುಂಡಿನ ದಾಳಿಗೆ ಬಲಿಯಾಗಿದ್ದಾಳೆ ಎಂದು ವರದಿಯಾಗಿದೆ.
ಹರ್ಸಿಮ್ರತ್ ರಾಂಧವಾ(21) ಮೃತ ವಿದ್ಯಾರ್ಥಿನಿ. ಇವರು ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಟೊರೊಂಟೊದಲ್ಲಿರುವ ಭಾರತದ ರಾಯಭಾರಿ ಕಚೇರಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ಭಾರತೀಯ ವಿದ್ಯಾರ್ಥಿ ಹರ್ಸಿಮ್ರತ್ ರಾಂಧವಾ ಅವರ ದುರಂತ ಸಾವಿನಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಸ್ಥಳೀಯ ಪೊಲೀಸರ ಪ್ರಕಾರ, ಎರಡು ವಾಹನಗಳ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಗುರಿ ತಪ್ಪಿದ ಬುಲೆಟ್ ವಿದ್ಯಾರ್ಥಿನಿಗೆ ತಗುಲಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ನಾವು ಅವರ ಕುಟುಂಬದ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದೆ.
ಘಟನೆಯ ವೀಡಿಯೊವನ್ನು ಪರಿಶೀಲಿಸಿದಾಗ ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಬಿಳಿ ಸೆಡಾನ್ ಕಾರಿನಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಕ್ಷಣ ಮಾತ್ರದಲ್ಲಿ ಸ್ಥಳದಿಂದ ಪರಾರಿಯಾಗಿದೆ. ಈ ಕುರಿತು ಕೆನಡಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.