ಹಿಂಸಾತ್ಮಕ ಪ್ರತಿಭಟನೆ : ನೇಪಾಳಕ್ಕೆ ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ ಏರ್‌ಲೈನ್ಸ್
Photo | NDTV
ಹೊಸದಿಲ್ಲಿ: ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ನೇಪಾಳಕ್ಕೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಇಂಡಿಗೋ ಏರ್‌ಲೈನ್ಸ್ ತಿಳಿಸಿದೆ.
“ಸೆಪ್ಟೆಂಬರ್ 10ರಂದು ಮಧ್ಯಾಹ್ನ 12ಗಂಟೆವರೆಗೆ ಕಠ್ಮಂಡುವಿಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ನಿಮಗೆ ಅನಾನೂಕೂಲತೆ ಉಂಟಾದಲ್ಲಿ ಪರ್ಯಾಯ ವಿಮಾನವನ್ನು ಆಯ್ಕೆ ಮಾಡಬಹುದು ಅಥವಾ ಮರುಪಾವತಿಯನ್ನು ಪಡೆಯಬಹುದು” ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಹಿಂಸಾತ್ಮಕ ಸರಕಾರಿ ವಿರೋಧಿ ಪ್ರತಿಭಟನೆ ಹಿನ್ನೆಲೆ ನೇಪಾಳದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವುದರಿಂದ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಇದರಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಹಲವಾರು ವಿಮಾನಗಳು ರದ್ದಾಗಿವೆ.
ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ, ಪ್ರಕ್ಷ್ಯುಬ್ಧ ಪರಿಸ್ಥಿತಿ ಹಿನ್ನೆಲೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಂಗಳವಾರ ನೇಪಾಳಕ್ಕೆ ವಿಮಾನ ಹಾರಟ ರದ್ದುಗೊಳಿಸಿತ್ತು.