×
Ad

ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿತ: ಮೃತರ ಸಂಖ್ಯೆ 61ಕ್ಕೇರಿಕೆ

Update: 2025-10-07 07:52 IST

PC: x.com/AJEnglish

ಸಿಡೊವರ್ಜೊ: ಕಳೆದ ವಾರ ಇಂಡೋನೇಷ್ಯಾದ ಇಸ್ಲಾಮಿಕ್ ಸನಿವಾಸ ಶಾಲಾ ಕಟ್ಟಡ ಕುಸಿದ ವೇಳೆ ನಾಪತ್ತೆಯಾಗಿದ್ದ ಹಲವು ಮಕ್ಕಳ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಸೋಮವಾರ ಪತ್ತೆ ಮಾಡಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೇರಿದೆ.

ಸೆಪ್ಟೆಂಬರ್ 29ರಂದು ಶಾಲೆಯ ಪ್ರಾರ್ಥನಾ ಮಂದಿರ ಕುಸಿದು ಈ ದುರಂತ ಸಂಭವಿಸಿತ್ತು. ಮೃತಪಟ್ಟ ಬಹುತೇಕ ಎಲ್ಲರೂ 12 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳು. ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸುವ ವೇಳೆ ಈ ದುರಂತ ಸಂಭವಿಸಿತ್ತು. ಶತಮಾನದಷ್ಟು ಹಳೆಯದಾದ ಜಾವಾ ದ್ವೀಪದ ಅಲ್ ಖೋಝ್ನಿ ಶಾಲೆಯ ಕಟ್ಟಡವನ್ನು ಅಕ್ರಮವಾಗಿ ವಿಸ್ತರಿಸಲಾಗಿತ್ತು ಎಂದು ಹೇಳಲಾಗಿದೆ.

ಒಬ್ಬ ವಿದ್ಯಾರ್ಥಿ ಮಾತ್ರ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದು, ಘಟನೆಯಲ್ಲಿ ಗಾಯಗೊಂಡ 99 ಮಕ್ಕಳನ್ನು ಚಿಕಿತ್ಸೆ ನೀಡಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡ ನಾಲ್ವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಮೂರು ದಿನಗಳ ಬಳಿಕವೂ ಅವಶೇಷಗಳ ಅಡಿಯಲ್ಲಿ ಯಾರು ಕೂಡಾ ಬದುಕಿ ಉಳಿದಿರುವ ಸಾಧ್ಯತೆ ಕಂಡುಬರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೃತದೇಹಗಳ ಪತ್ತೆಗೆ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News