ಇರಾನ್ ನಿಂದ ಹೆಚ್ಚು ಪಾರದರ್ಶಕತೆಗೆ ಐಎಇಎ ಆಗ್ರಹ; ಪರಮಾಣು ಚಟುವಟಿಕೆಯ ಸಂಪೂರ್ಣ ವಿವರ ಒದಗಿಸಲು ಒತ್ತಾಯ
ರಫೇಲ್ ಗ್ರಾಸಿ | PC : aljazeera.com
ಕೈರೋ: ತನ್ನ ಪರಮಾಣು ಕಾರ್ಯಕ್ರಮದ ಕುರಿತ ಮಾತುಕತೆಯಲ್ಲಿ ನಿರ್ಬಂಧಗಳಿಂದ ಪರಿಹಾರದ ಖಾತರಿ ಬಯಸುತ್ತಿರುವ ಇರಾನ್ ಹೆಚ್ಚು ಪಾರದರ್ಶಕವಾಗಿರಬೇಕು ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯ ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಆಗ್ರಹಿಸಿದ್ದಾರೆ.
ಸುಮಾರು 60 ಪ್ರತಿಶತದಷ್ಟು ಸಮೃದ್ಧವಾಗಿರುವ ಯುರೇನಿಯಂ ಉತ್ಪಾದನೆಯನ್ನು ಇರಾನ್ ಹೆಚ್ಚಿಸಿದೆ(ಪರಮಾಣು ಅಸ್ತ್ರಗಳಿಗೆ 90 ಪ್ರತಿಶತದ ಮಟ್ಟ ಅಗತ್ಯವಿದೆ) ಎಂದು ಐಎಇಎ ಇತ್ತೀಚೆಗೆ ವರದಿ ಮಾಡಿದೆ. ವರದಿ ನಿಷ್ಪಕ್ಷಪಾತವಾಗಿದೆ ಎಂದು ಕೈರೋದಲ್ಲಿ ಈಜಿಪ್ಟ್ ವಿದೇಶಾಂಗ ಸಚಿವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ರಫೇಲ್ ಗ್ರಾಸಿ ಸಮರ್ಥಿಸಿಕೊಂಡಿದ್ದಾರೆ.
`ಯಥಾಸ್ಥಿತಿಯನ್ನು ವರದಿ ಉಲ್ಲೇಖಿಸಿದೆ. ಇದರಲ್ಲಿ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಇರಾನ್ ನಿಂದ ಇನ್ನಷ್ಟು ಪಾರದರ್ಶಕತೆಯ ಅಗತ್ಯವಿದೆ. ಹಲವಾರು ಚಟುವಟಿಕೆಗಳ ಬಗ್ಗೆ ಸಂಪೂರ್ಣ ವಿವರಣೆಯ ಅಗತ್ಯವಿದೆ. ವರದಿಯ ಕೆಲವು ಅಂಶಗಳು ಕೆಲವರಿಗೆ ಇಷ್ಟವಾಗದಿರಬಹುದು. ಟೀಕೆಗಳು ನಮಗೆ ಸಾಮಾನ್ಯವಾಗಿದೆʼ ಎಂದವರು ಹೇಳಿದ್ದಾರೆ.
ಐಎಇಎ ಆಡಳಿತ ಮಂಡಳಿಯು ವಿಯೆನ್ನಾದಲ್ಲಿ ಜೂನ್ 9ರಿಂದ ಆರಂಭಗೊಳ್ಳಲಿರುವ ತ್ರೈಮಾಸಿಕ ಸಭೆಯಲ್ಲಿ ಇರಾನ್ ನ ಪರಮಾಣು ಚಟುವಟಿಕೆಗಳ ಪರಿಶೀಲನೆ ನಡೆಸಲಿದೆ.
►ಐಎಇಎ ವರದಿ ತಿರಸ್ಕರಿಸಿದ ಇರಾನ್
ಐಎಇಎ ವರದಿ ರಾಜಕೀಯ ಉದ್ದೇಶದಿಂದ ಕೂಡಿದ್ದು ವಿಶ್ವಾಸಾರ್ಹವಲ್ಲದ ಮತ್ತು ದಾರಿ ತಪ್ಪಿಸುವ ಮಾಹಿತಿಯನ್ನು ಒಳಗೊಂಡಿರುವುದರಿಂದ ಅದನ್ನು ತಿರಸ್ಕರಿಸುವುದಾಗಿ ಇರಾನ್ ಹೇಳಿದೆ.
ಐಎಇಎ ಪ್ರಧಾನ ಕಾರ್ಯದರ್ಶಿ ರಫೇಲ್ ಗ್ರಾಸಿಗೆ ದೂರವಾಣಿ ಕರೆ ಮಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಈ ವರದಿಯ ನೆಪದಲ್ಲಿ ಯುರೋಪಿಯನ್ ದೇಶಗಳು ಇರಾನ್ ವಿರುದ್ಧ ನಿರ್ಬಂಧ ಮರುಜಾರಿಗೊಳಿಸಿದರೆ ಇರಾನ್ ಪ್ರತೀಕಾರ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.