ಇಸ್ರೇಲ್ ದಾಳಿಯ ಬಳಿಕ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ: ಇರಾನ್
PC : X
ಕೈರೋ: ಇಸ್ರೇಲ್ ತನ್ನ ದೀರ್ಘಕಾಲಿಕ ಶತ್ರುವಿನ ವಿರುದ್ಧ ಈವರೆಗಿನ ಬೃಹತ್ ಮಿಲಿಟರಿ ದಾಳಿಯನ್ನು ನಡೆಸಿದ ಬಳಿಕ ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದೊಂದಿಗೆ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ. ಆದರೆ ರವಿವಾರದ ಮಾತುಕತೆಗಳಲ್ಲಿ ಭಾಗವಹಿಸಬೇಕೇ ಎನ್ನುವುದನ್ನು ತಾನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ತಿಳಿಸಿದೆ.
ಅಮೆರಿಕವು ಮಾತುಕತೆಗಳನ್ನು ಅರ್ಥಹೀನಗೊಳಿಸುವ ರೀತಿಯಲ್ಲಿ ವರ್ತಿಸಿದೆ. ಮಾತುಕತೆಗಳನ್ನು ನಡೆಸುವುದಾಗಿ ಹೇಳಿಕೊಳ್ಳುವ ನೀವು ಇದೇ ವೇಳೆ ಯಹೂದಿ ಆಡಳಿತಕ್ಕೆ ಇರಾನಿನ ಪ್ರದೇಶವನ್ನು ಗುರಿಯಾಗಿಸಿಕೊಳ್ಳಲು ಅವಕಾಶ ನೀಡುತ್ತಿದ್ದೀರಿ ಎಂದು ಇರಾನಿನ ವಿದೇಶಾಂಗ ವಕ್ತಾರ ಇಸ್ಮಾಯೀಲ್ ಬಘೇಯಿ ಅವರನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮವು ಶನಿವಾರ ವರದಿ ಮಾಡಿದೆ.
ಈ ಸಂಬಂಧ ನಾವು ರವಿವಾರ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿರುವ ಬಘೇಯಿ,ರಾಜತಾಂತ್ರಿಕ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವಲ್ಲಿ ಇಸ್ರೇಲ್ ಯಶಸ್ವಿಯಾಗಿದೆ ಮತ್ತು ಅಮೆರಿಕದ ಅನುಮತಿಯಿಲ್ಲದಿದ್ದರೆ ಇಸ್ರೇಲ್‌ನ ದಾಳಿ ನಡೆಯುತ್ತಿರಲಿಲ್ಲ. ಅಮೆರಿಕವು ದಾಳಿಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇಸ್ರೇಲ್‌ನ ದಾಳಿಗಳಲ್ಲಿ ಅಮೆರಿಕವು ಶಾಮೀಲಾಗಿದೆ ಎಂದು ಇರಾನ್ ಈ ಮೊದಲು ಆರೋಪಿಸಿತ್ತು,ಆದರೆ ಇದನ್ನು ನಿರಾಕರಿಸಿದ್ದ ಅಮೆರಿಕ,ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಸುವುದು ‘ಬುದ್ಧಿವಂತಿಕೆ’ ಯಾಗುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರಾನ್‌ಗೆ ತಿಳಿಸಿತ್ತು.
ಅಮೆರಿಕ-ಇರಾನ್ ನಡುವೆ ಆರನೇ ಸುತ್ತಿನ ಪರಮಾಣು ಮಾತುಕತೆ ರವಿವಾರ ಮಸ್ಕತ್‌ನಲ್ಲಿ ನಡೆಯಬೇಕಿದೆ,ಆದರೆ ಇಸ್ರೇಲಿ ದಾಳಿಗಳ ಬಳಿಕ ಅದು ನಡೆಯುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ತನ್ನ ಯುರೇನಿಯಂ ಸಮೃದ್ಧ ಕಾರ್ಯಕ್ರಮವು ನಾಗರಿಕ ಉದ್ದೇಶವನ್ನು ಮಾತ್ರ ಹೊಂದಿದೆ,ಬೇರ್ಯಾವ ಉದ್ದೇಶವನ್ನು ಅದು ಹೊಂದಿಲ್ಲ ಎಂದು ಇರಾನ್ ಪ್ರತಿಪಾದಿಸುತ್ತಲೇ ಬಂದಿದೆ ಮತ್ತು ತಾನು ರಹಸ್ಯವಾಗಿ ಅಣ್ವಸ್ತ್ರಗಳನ್ನು ಅಭಿವೃದ್ಧಿಗೊಳಿಸುತ್ತಿದ್ದೆನೆ ಎಂಬ ಇಸ್ರೇಲ್ ಆರೋಪಗಳನ್ನು ತಿರಸ್ಕರಿಸಿದೆ.
ಇಸ್ರೇಲ್ ದಾಳಿಗಳನ್ನು ನಡೆಸಲಿದೆ ಎನ್ನುವುದು ತನಗೆ ಮತ್ತು ತನ್ನ ತಂಡಕ್ಕೆ ತಿಳಿದಿತ್ತು,ಆದರೂ ಒಪ್ಪಂದಕ್ಕೆ ಇನ್ನೂ ಅವಕಾಶವಿದೆ ಎಂದು ತಾವು ಭಾವಿಸಿದ್ದೇವೆ ಎಂದು ಟ್ರಂಪ್ ಸುದ್ದಿಸಂಸ್ಥೆಗೆ ತಿಳಿಸಿದರು.