ಭಾರತೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ವಾಯುಕ್ಷೇತ್ರವನ್ನು ತೆರೆದಿಟ್ಟ ಇರಾನ್
PC : Randhir Jaiswal - X
ಟೆಹರಾನ್: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲು ಇರಾನ್ ತನ್ನ ರಾಷ್ಟ್ರೀಯ ವಾಯುಯಾನ ಸಂಸ್ಥೆ ‘ಮಹಾನ್ ಏರ್’ ಅನ್ನು ಬಳಸಿಕೊಂಡಿದೆ.
ಭಾರತೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸುವುದಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ತನ್ನ ವಾಯುಕ್ಷೇತ್ರ ಬಳಕೆಗೆ ಇರುವ ನಿರ್ಬಂಧದಿಂದ ಈ ವಿಮಾನಗಳಿಗೆ ವಿಶೇಷ ವಿನಾಯಿತಿ ನೀಡುವುದಾಗಿ ಇರಾನ್ ಶುಕ್ರವಾರ ಹೇಳಿದೆ.
ಇಸ್ರೇಲ್-ಇರಾನ್ ಸಂಘರ್ಷದಿಂದ ಬಾಧಿತರಾಗಿರುವ ಪಶ್ಚಿಮ ಏಶ್ಯದಲ್ಲಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರ ರೂಪಿಸಿರುವ ‘ಆಪರೇಷನ್ ಸಿಂಧು’ ಕಾರ್ಯಾಚರಣೆಯ ಭಾಗವಾಗಿರುವ ಭಾರತೀಯ ಅಧಿಕಾರಿಗಳ ಜೊತೆ ಇರಾನಿ ಅಧಿಕಾರಿಗಳು ನಿಕಟವಾಗಿ ಕಾರ್ಯಾಚರಿಸುತ್ತಿದ್ದಾರೆ.
ಬ್ಯಾಚ್ ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಮೂರು ಮಹಾನ್ ಏರ್ ವಿಮಾನಗಳ ಹಾರಾಟವನ್ನು ಏರ್ಪಡಿಸಲಾಗಿದೆಯೆಂದು ಭಾರತದಲ್ಲಿನ ಇರಾನ್ ರಾಯಭಾರಿ ಕಚೇರಿಯಲ್ಲಿನ ನಿಯೋಗದ ಉಪಮುಖ್ಯಸ್ಥ ಜಾವೇದ್ ಹೊಸೈನಿ ಅವರು ಹೇಳಿದ್ದಾರೆ.
‘‘ತೆರವು ಕಾರ್ಯಾಚರಣೆಯಲ್ಲಿ ನಾವು ಭಾರತದ ಜೊತೆ ಸಹಕರಿಸುತ್ತಿದ್ದೇವೆ. ಮೊದಲಿಗೆ ಭಾರತೀಯ ಪ್ರಜೆಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗುವುದು ಹಾಗೂ ಆನಂತರ ಮುಂದಿನ ಏರ್ಪಾಡುಗಳಿಗೆ ಸಹಕರಿಸಲಾಗುತ್ತದೆ. ಮೂರು ಮಹಾನ್ ಏರ್‌ಲೈನ್ ವಿಮಾನಗಳು ಅವರನ್ನು ತಾಯ್ನಾಡಿಗೆ ಕರೆತರಲಿದೆ ಎಂದು ಹೊಸೈನಿ ತಿಳಿಸಿದ್ದಾರೆ.
‘‘ಇರಾನ್ ನ ವಾಯುಕ್ಷೇತ್ರವನ್ನು ಮುಚ್ಚುಗಡೆಗೊಳಿಸಲಾಗಿದೆ. ಆದರೆ ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗಿದೆಯೆಂದು ಹೊಸೈನಿ ಅವರು ತಿಳಿಸಿದ್ದಾರೆ.
ಪ್ರಸಕ್ತ ಇರಾನ್ ನಲ್ಲಿ ಸುಮಾರು 10 ಸಾವಿರ ಭಾರತೀಯ ಪ್ರಜೆಗಳಿಂದ್ದಾರೆಂದು ಇರಾನ್ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಸುಮಾರು 1 ಸಾವಿರ ಮಂದಿಯನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದವರು ಹೇಳಿದ್ದಾರೆ.
ಭಾರತೀಯ ಪ್ರಜೆಗಳು ತೆರವು ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲು ಹಾಗೂ ಅವರ ಸುರಕ್ಷತೆಯನ್ನು ಖಾತರಿಪಡಿಸುವ ಬಗ್ಗೆ ತಾನು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಗಾಚಿ ಜೊತೆ ಮಾತುಕತೆ ನಡೆಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ದೃಢಪಡಿಸಿದ್ದಾರೆ.
ಈ ವಿಮಾನಗಳು ಇರಾನ್ ನ ಮಶಾದ್ ನಗರದಿಂದ ದಿಲ್ಲಿಗೆ ಹಂತಗಳಲ್ಲಿ ಆಗಮಿಸುವವಿರೀಕ್ಷೆಯಿದೆ. ಆನಂತರ ಇನ್ನಷ್ಟು ತಂಡಗಳ ವಿಮಾನಗಳು ಬರಲಿವೆಯೆಂದು ಭಾರತೀಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಮಂಬರುವ ದಿನಗಳಲ್ಲಿ ಇನ್ನೂ ಸುಮಾರು 1 ಸಾವಿರ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಾಸ್ ಬರುವ ನಿರೀಕ್ಷೆಯಿದೆ. ಈ ಮಧ್ಯೆ ಇರಾನ್‌ನಿಂದ ತೆರವುಗೊಳಿಸಲ್ಪಟ್ಟ 56 ಭಾರತೀಯ ವಿದ್ಯಾರ್ಥಿಗಳ್ನು ಹೊತ್ತ ವಿಶೇಷ ಖಾಸಗಿ ವಿಮಾನವು ಶನಿವಾರ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಜಿದ್ದಾ ಮಾರ್ಗವಾಗಿ ತೆರವುಗೊಳಿಸಲಾದ ಈ ತಂಡದಲ್ಲಿ ಉತ್ತರಪ್ರದೇಶದ 46, ಗುಜರಾತ್‌ನ 5, ದಿಲ್ಲಿಯ 3 ಹಾಗೂ ರಾಜಸ್ತಾನದ ಒಬ್ಬರು ಇದ್ದಾರೆ.