ನಿರ್ಬಂಧ ತೆರವುಗೊಳಿಸುವುದಾಗಿ ಅಮೆರಿಕ ಖಾತರಿ ನೀಡಬೇಕು: ಇರಾನ್ ಆಗ್ರಹ
ಟೆಹ್ರಾನ್: ಪರಮಾಣು ಒಪ್ಪಂದದ ಷರತ್ತಿನಂತೆ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಅಮೆರಿಕ ಖಾತರಿ ನೀಡಬೇಕು ಎಂದು ಇರಾನ್ ಸೋಮವಾರ ಆಗ್ರಹಿಸಿದೆ.
ಸೋಮವಾರ ಟೆಹ್ರಾನ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಕೈ ` ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ತೆಗೆದು ಹಾಕಲಾಗಿದೆ ಎಂಬ ಖಾತರಿಯನ್ನು ನಾವು ಬಯಸುತ್ತೇವೆ. ಇದುವರೆಗೆ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಅಮೆರಿಕನ್ನರು ಬಯಸಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತು ಎಪ್ರಿಲ್‍ನಿಂದ ಇರಾನ್ ಮತ್ತು ಅಮೆರಿಕ ನಡುವೆ ಮಾತುಕತೆ ನಡೆಯುತ್ತಿದೆ. ಈ ಮಧ್ಯೆ, ಸೋರಿಕೆಯಾದ ವಿಶ್ವಸಂಸ್ಥೆಯ ವರದಿಯೊಂದು ಇರಾನ್ ಸುಧಾರಿತ ಯುರೇನಿಯಂ ಉತ್ಪಾದನೆಯನ್ನು ಹೆಚ್ಚಿಸಿದೆ ಎಂದು ಉಲ್ಲೇಖಿಸಿದ ನಂತರ ಒಪ್ಪಂದಕ್ಕಾಗಿ ಅಮೆರಿಕ ಪ್ರಸ್ತಾಪ ಮುಂದುವರಿಸಿದೆ. ಆದರೆ ಇರಾನ್ ವರದಿಯನ್ನು ತಿರಸ್ಕರಿಸಿದ್ದು, ನಿರ್ಬಂಧಗಳನ್ನು ಮರುಜಾರಿಗೊಳಿಸುವುದಾಗಿ ಬೆದರಿಕೆ ಹಾಕಿರುವ ಯುರೋಪಿಯನ್ ಆಡಳಿತಗಳು ಇದಕ್ಕೆ ವರದಿಯನ್ನು ಆಧಾರವಾಗಿ ಬಳಸಿದರೆ ಪ್ರತೀಕಾರ ತೀರಿಸುವುದಾಗಿ ಎಚ್ಚರಿಸಿದೆ. ಇರಾನ್ ಪರಮಾಣು ಅಸ್ತ್ರಗಳನ್ನು ಉತ್ಪಾದಿಸಲು ಬಯಸುತ್ತಿದೆ ಎಂದು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಆರೋಪಿಸುತ್ತಿದ್ದು ಇದನ್ನು ಇರಾನ್ ಪದೇ ಪದೇ ತಿರಸ್ಕರಿಸಿದ್ದು ನಾಗರಿಕ ಬಳಕೆಯ ವಿದ್ಯುತ್ ಉತ್ಪಾದನೆಗೆ ಯುರೇನಿಯಂ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.