ಕೀವ್ ಮೇಲಿನ ದಾಳಿ ಮೂರು ದಿನ ಸ್ಥಗಿತ: ವ್ಲಾದಿಮಿರ್ ಪುಟಿನ್
ರಶ್ಯ ತಲುಪಿದ ಅಮೆರಿಕ ಪ್ರತಿನಿಧಿಗಳು: ನಾವು ವೈಮಾನಿಕ ದಾಳಿ ನಡೆಸುವುದಿಲ್ಲ; ಝೆಲೆನ್‍ಸ್ಕಿ
ವ್ಲಾಡಿಮಿರ್ ಪುಟಿನ್ | Photo Credit : PTI
ಮಾಸ್ಕೊ: ಅಮೆರಿಕದ ಪ್ರತಿನಿಧಿಗಳ ಭೇಟಿಯ ಹಿನ್ನೆಲೆಯಲ್ಲಿ ಉಕ್ರೇನ್ ರಾಜಧಾನಿ ಕೀವ್ ಮೇಲಿನ ದಾಳಿಯನ್ನು ಮೂರು ದಿನಗಳ ಕಾಲ ತಡೆಹಿಡಿಯಲು ಆದೇಶಿಸಿರುವುದಾಗಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಹೇಳಿದ್ದಾರೆ.
ಯುದ್ಧವನ್ನು ಅಂತ್ಯಗೊಳಿಸುವ ಪ್ರಸ್ತಾಪದ ಕುರಿತು ಚರ್ಚಿಸಲು ಅಮೆರಿಕದ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ದೇಶದ ಇತರ ಭಾಗಗಳಲ್ಲಿ ದಾಳಿಗಳು ಮುಂದುವರಿದಿವೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್‍ರನ್ನು ಉಲ್ಲೇಖಿಸಿ `ತಾಸ್' ಸುದ್ದಿಸಂಸ್ಥೆ ವರದಿ ಮಾಡಿದೆ.
ಶನಿವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗುವಂತೆ ಮೂರು ದಿನಗಳ ಕಾಲ ಕೀವ್ ವಿರುದ್ಧ ಯಾವುದೇ ದಾಳಿ ನಡೆಸದಂತೆ ಪುಟಿನ್ ಆದೇಶಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಅವರೊಂದಿಗೆ ಶಾಂತಿ ಮಾತುಕತೆಗಾಗಿ ಅಮೆರಿಕದ ನಿಯೋಗಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಕೀವ್‍ಗೆ ಭೇಟಿ ನೀಡುವ ತಯಾರಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಮಧ್ಯೆ, ಪ್ರಸ್ತುತ ಪರಿಸ್ಥಿತಿಗೆ ನೈಜ ಪರಿಹಾರವನ್ನು ಕಂಡುಕೊಳ್ಳಲು ಅಮೆರಿಕ ಆಡಳಿತವು ಭೂಮಟ್ಟದ ನೈಜತೆಗಳನ್ನು ಪರಿಗಣಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಉಕ್ರೇನ್ ತೀವ್ರ ಹಿನ್ನಡೆಯಲ್ಲಿದೆ ಎಂಬುದನ್ನು ಅವರು ಮರೆಯಬಾರದು ಎಂದು ರಶ್ಯದ ಉಪ ವಿದೇಶಾಂಗ ಸಚಿವ ಸೆರ್ಗೆಯ್ ರಿಯಾಬ್ಕೋವ್ ಆಗ್ರಹಿಸಿರುವುದಾಗಿ ವರದಿಯಾಗಿದೆ.
ನಾವು ವೈಮಾನಿಕ ದಾಳಿ ನಡೆಸುವುದಿಲ್ಲ: ಝೆಲೆನ್‍ಸ್ಕಿ
ಈ ವಾರಾಂತ್ಯದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಪ್ರತಿನಿಧಿಗಳು ಮಾಸ್ಕೊ ಮತ್ತು ಕೀವ್‍ನಲ್ಲಿ ಸಭೆಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿರುವಂತೆಯೇ, ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ರಶ್ಯದೊಂದಿಗೆ ತಾತ್ಕಾಲಿಕ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.
ನಮ್ಮ ಕಡೆಯಿಂದ ಯಾವುದೇ ವೈಮಾನಿಕ ದಾಳಿಗಳು ಇರುವುದಿಲ್ಲ, ಮತ್ತು ರಶ್ಯ ಕೂಡ ತನ್ನ ಕಡೆಯಿಂದ ಯಾವುದೇ ವೈಮಾನಿಕ ದಾಳಿಗಳು ನಡೆಯದಂತೆ ನೋಡಿಕೊಳ್ಳಬೇಕು. ಅಮೆರಿಕನ್ ಭೇಟಿಗೆ ಸಂಬಂಧಿಸಿದ ಮಾತುಕತೆಗಳು ಮತ್ತು ಸಾರಿಗೆ ವ್ಯವಸ್ಥೆಗಳನ್ನು ನಿರ್ವಹಿಸಲು ಅಗತ್ಯವಿರುವ ಸಮಯದವರೆಗೆ ಇದನ್ನು ಪಾಲಿಸಬೇಕು' ಎಂದು ಝೆಲೆನ್‍ಸ್ಕಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕ ಪ್ರತಿನಿಧಿಗಳ ಕೀವ್ ಭೇಟಿಯ ಸಿದ್ಧತೆಗಾಗಿ ಉಕ್ರೇನ್ ರಾಜತಾಂತ್ರಿಕರು ಚರ್ಚೆ ನಡೆಸಿದ್ದಾರೆ. ಕುಶ್ನರ್ ಮತ್ತು ವಿಟ್ಕಾಫ್ ಅವರ ಸುರಕ್ಷಿತ ಆಗಮನಕ್ಕೆ ಅನುಕೂಲವಾಗುವಂತೆ ರಶ್ಯದ ಮೇಲೆ ಯಾವುದೇ ವೈಮಾನಿಕ ದಾಳಿ ನಡೆಸದಿರಲು ಕೀವ್ ನಿರ್ಧರಿಸಿದೆ. ಅಮೆರಿಕ ಪ್ರತಿನಿಧಿಗಳ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆಯೇ ಹೊರತು ರಶ್ಯವಲ್ಲ. ಇದೀಗ ನಾಲ್ಕೂವರೆ ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಉಕ್ರೇನ್ ನೈಜ ಆಯ್ಕೆಗಳನ್ನು ಹುಡುಕುತ್ತಿದೆ ಎಂದು ಝೆಲೆನ್‍ಸ್ಕಿ ಹೇಳಿದ್ದಾರೆ.
ರಶ್ಯ ತಲುಪಿದ ಅಮೆರಿಕ ಪ್ರತಿನಿಧಿಗಳು
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜಾರೆಡ್ ಕುಶ್ನರ್ ಅವರನ್ನು ಹೊತ್ತು ತಂದಿದೆ ಎನ್ನಲಾದ ಜೆಟ್ ವಿಮಾನವು ಮಾಸ್ಕೋದ ವ್ನುಕೋವೊ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ರಶ್ಯದ `ಇಂಟರ್‍ಫ್ಯಾಕ್ಸ್' ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.
ವಿಮಾನವು ಆಗಮಿಸುವುದಕ್ಕೂ ಕೆಲವೇ ಕ್ಷಣಗಳ ಮೊದಲು ವಿಮಾನ ನಿಲ್ದಾಣದ ಸರಕಾರಿ ಟರ್ಮಿನಲ್ ಬಳಿ ರಾಜತಾಂತ್ರಿಕ ನೋಂದಣಿ ಫಲಕಗಳನ್ನು ಹೊಂದಿರುವ ವಾಹನಗಳ ಸಾಲು ನೆರೆದಿತ್ತು ಎಂದು ವರದಿ ತಿಳಿಸಿದೆ.
ವಿಟ್ಕಾಫ್ ಮತ್ತು ಕುಶ್ನರ್ ಅವರು ಮಾಸ್ಕೊದಲ್ಲಿ ರಶ್ಯ ಅಧ್ಯಕ್ಷ ಪುಟಿನ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ರವಿವಾರ ಕೀವ್‍ಗೆ ತೆರಳಿ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಅವರನ್ನು ಭೇಟಿಯಾಗಲಿದ್ದಾರೆ. ರಶ್ಯ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಉದ್ದೇಶಿತ ಪ್ರಸ್ತಾವನೆಗಳನ್ನು ಈ ಪ್ರತಿನಿಧಿಗಳು ಎರಡೂ ದೇಶಗಳ ನಾಯಕರಿಗೆ ಪ್ರಸ್ತುತಪಡಿಸಲಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.