ರಹಸ್ಯ ಮಾಹಿತಿ ಸೋರಿಕೆ: ಹಿರಿಯ ಅಧಿಕಾರಿಗಳನ್ನು ಸುಳ್ಳುಪತ್ತೆ ಪರೀಕ್ಷೆಗೊಳಪಡಿಸಿದ ಅಮೆರಿಕ; ವರದಿ
ಡೊನಾಲ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಪತ್ರಕರ್ತರಿಗೆ ರಹಸ್ಯ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಅಮೆರಿಕ ಸರಕಾರದ ತನಿಖಾಧಿಕಾರಿಗಳು ಜಾಯಿಂಟ್ ಸ್ಟಾಫ್‌ನ (ಸಂಯುಕ್ತ ರಕ್ಷಣಾ ಸಿಬ್ಬಂದಿ) ಸುಮಾರು 50 ಸದಸ್ಯರನ್ನು ಆಗಸ್ಟ್‌ನಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದ್ದಾರೆ. ದೀರ್ಘವ್ಯಾಪ್ತಿಯ ಕ್ಷಿಪಣಿಗಳು ಮತ್ತು ಪೇಟ್ರಿಯಟ್ ಇಂಟರ್‌ಸೆಪ್ಟರ್‌ಗಳಂತಹ ನಿರ್ಣಾಯಕ ಶಸ್ತ್ರಾಸ್ತ್ರಗಳ ಕೊರತೆಯ ಬಗ್ಗೆ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದ ಬಳಿಕ ಈ ಪರೀಕ್ಷೆಗಳು ನಡೆದಿವೆ.
ಮಿಲಿಟರಿ ಅಧಿಕಾರಿಗಳು ಅಥವಾ ನಾಗರಿಕ ಉದ್ಯೋಗಿಗಳು ಶಸ್ತ್ರಾಸ್ತ್ರಗಳ ಕೊರತೆ ಸೇರಿದಂತೆ ರಹಸ್ಯ ಮಾಹಿತಿಯನ್ನು ಪತ್ರಕರ್ತರಿಗೆ ಸೋರಿಕೆ ಮಾಡಿದ್ದಾರೆಯೇ ಎನ್ನುವುದನ್ನು ಪತ್ತೆ ಹಚ್ಚುವುದು ಈ ಪರೀಕ್ಷೆಗಳ ಉದ್ದೇಶವಾಗಿತ್ತು.
ಸುದ್ದಿಸಂಸ್ಥೆಯ ವರದಿ ಪ್ರಕಾರ, ಬೇಸಿಗೆಯ ಆರಂಭದಲ್ಲಿ ಯುಎಸ್ ಸೆಂಟ್ರಲ್ ಕಮಾಂಡ್ ಮತ್ತು ಇತರ ಯುದ್ಧ ಕಮಾಂಡ್‌ಗಳ ಅಧಿಕಾರಿಗಳು ಸೇರಿದಂತೆ ಹಲವರನ್ನು ಸಹ ಇದೇ ರೀತಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅತ್ಯಂತ ರಹಸ್ಯ ಮಾಹಿತಿಗಳನ್ನು ಹೊಂದಿರುವ ಅಧಿಕಾರಿಗಳಿಗೆ ಅನುಮೋದನೆಗಳನ್ನು ನವೀಕರಿಸಲು ಪಾಲಿಗ್ರಾಫ್ ಪರೀಕ್ಷೆಗಳನ್ನು ಸಾಮಾನ್ಯವಾಗಿ ಪ್ರತಿ ಕೆಲವು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಆದಾಗ್ಯೂ, ಸೋರಿಕೆಯ ತನಿಖೆಗಾಗಿ ಏಕಕಾಲದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಪರೀಕ್ಷೆಗೆ ಒಳಪಡಿಸಿರುವುದು ಅತ್ಯಂತ ಅಪರೂಪದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕಾರ್ಯಾಚರಣೆಗಳು, ನೀತಿಗಳು ಮತ್ತು ಯುದ್ಧ ಯೋಜನೆಗಳನ್ನು ಸಮನ್ವಯಗೊಳಿಸುವ ಅಮೆರಿಕದ ಜಾಯಿಂಟ್ ಸ್ಟಾಫ್‌ನಲ್ಲಿ 1,500 ರಿಂದ 2,000 ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ.
ಈ ನಡುವೆ ಪೆಂಟಗನ್ ವಕ್ತಾರ ಸೀನ್ ಪರ್ನೆಲ್ ಅವರು,ಆಂತರಿಕ ಸಿಬ್ಬಂದಿ ಅಥವಾ ತನಿಖಾ ವಿಷಯಗಳ ಕುರಿತು ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಎಲ್ಲ ರಹಸ್ಯ ಮಾಹಿತಿಗಳ ಸೋರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತದೆ ಎಂದು ತಿಳಿಸಿದರು.
ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿರುವ ಕುರಿತು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲಾಗಿದ್ದ ಪರೀಕ್ಷೆಯಲ್ಲಿ ಯಾರೂ ವಿಫಲರಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ವರದಿಗಳ ಪ್ರಕಾರ, ರಹಸ್ಯ ಮಾಹಿತಿಯ ಸೋರಿಕೆ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನಗೊಂಡಿದ್ದರು. ವರ್ಗೀಕೃತ ಶಸ್ತ್ರಾಸ್ತ್ರಗಳ ಮಾಹಿತಿಯು ಕೆಲವೇ ಅಧಿಕಾರಿಗಳಿಗೆ ಲಭ್ಯವಿದ್ದು,ಇದು ಅವರಲ್ಲಿ ಯಾರಾದರೂ ವಿದೇಶಗಳಿಗಾಗಿ ಬೇಹುಗಾರಿಕೆ ನಡೆಸಿದ್ದಾರೆಯೇ ಎಂಬ ಆತಂಕವನ್ನು ಸೃಷ್ಟಿಸಿತ್ತು.
ಎಲ್ಲ ಹಿರಿಯ ಅಧಿಕಾರಿಗಳನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗಿರಲಿಲ್ಲ. ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಅಧ್ಯಕ್ಷ ಜನರಲ್ ಡ್ಯಾನ್ ಕೇನ್ ಅವರನ್ನು ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಹಿರಿಯ ಪೆಂಟಗನ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಾಹಿತಿ ಸೋರಿಕೆ ಮಾಡುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಪೆಂಟಗನ್ ಮತ್ತು ನ್ಯಾಯಾಂಗ ಇಲಾಖೆ ಜಂಟಿ ಕಾರ್ಯಪಡೆಯನ್ನು ರಚಿಸಿವೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಜುಲೈನಲ್ಲಿ ಪ್ರಕಟಿಸಿದ್ದರು.