ನವೆಂಬರ್ 27 ಅನ್ನು ಬಾಲ್ಯ ವಿವಾಹ ವಿರುದ್ಧದ ದಿನ ಎಂದು ಘೋಷಿಸಿದ ವಿಶ್ವಸಂಸ್ಥೆ
Photo Credit ; un.org
ವಿಶ್ವಸಂಸ್ಥೆ: ಬಾಲ್ಯ ವಿವಾಹದ ವಿರುದ್ಧದ ಭಾರತದ ಹೋರಾಟಕ್ಕೆ ದೊರೆತ ದೊಡ್ಡ ಜಯವಾಗಿ, ವಿಶ್ವಸಂಸ್ಥೆಯು ನವೆಂಬರ್ 27 ಅನ್ನು `ಬಾಲ್ಯ ವಿವಾಹ ಮತ್ತು ಬಲವಂತದ ವಿವಾಹಗಳ ನಿರ್ಮೂಲನೆಯ ಅಂತರರಾಷ್ಟ್ರೀಯ ದಿನ' ಎಂದು ಘೋಷಿಸಿದೆ.
ಈ ಕ್ರಮವು `ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್' ಅಭಿಯಾನ ಮತ್ತು ಬಾಲ್ಯ ವಿವಾಹದ ವಿರುದ್ಧ ಎನ್‌ಡಿಟಿವಿ ನಡೆಸುತ್ತಿರುವ ಅಭಿಯಾನಕ್ಕೆ ಸಿಕ್ಕಿದ ದೊಡ್ಡ ಜಾಗತಿಕ ಬೆಂಬಲವಾಗಿದೆ. ಎನ್ಡಿಟಿವಿ ಮತ್ತು `ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್' ಸಂಸ್ಥೆಗಳು 2023 ರಿಂದ `ಬಾಲ್ಯ ವಿವಾಹ ಮುಕ್ತ ಭಾರತ' ಅಭಿಯಾನವನ್ನು ನಡೆಸುತ್ತಿವೆ.
ಬಾಲ್ಯ ವಿವಾಹದ ವಿರುದ್ಧದ ಹೋರಾಟಕ್ಕೆ ಮೀಸಲಾದ ದಿನವನ್ನು ನಿಗದಿಪಡಿಸುವಂತೆ `ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್' ಸಂಸ್ಥೆಯ ಸಂಸ್ಥಾಪಕ ಭುವನ್ ರಿಭು ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸೆಪ್ಟೆಂಬರ್ 4 ರಂದು ಸಿಯೆರಾ ಲಿಯೋನ್ ದೇಶವು ವಿಶ್ವಸಂಸ್ಥೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದು ಅದು ಅಂಗೀಕಾರಗೊಂಡಿದೆ.
ಈ ನಿರ್ಣಯದ ಅಂಗೀಕಾರದ ಸಮಯದಲ್ಲಿ ವಿಶ್ವಸಂಸ್ಥೆಗೆ ಆಹ್ವಾನಿಸಲ್ಪಟ್ಟ ಏಕೈಕ ನಾಗರಿಕ ಸಮಾಜದ ಪ್ರತಿನಿಧಿಯಾಗಿದ್ದ ರಿಭು ಅವರು ಈ ನಿರ್ಣಯವನ್ನು ಸ್ವಾಗತಿಸಿದ್ದು ಇದು ಸಮಸ್ತ ಭಾರತೀಯರಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.