ವೈದ್ಯರು, ದಾದಿಯರ ರಜೆ ರದ್ದುಗೊಳಿಸಿದ ಇರಾನ್ : ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ
Photo credit: PTI
ಟೆಹರಾನ್ : ಇಸ್ರೇಲ್ ಜೊತೆ ಉದ್ವಿಗ್ನತೆ ಹಿನ್ನೆಲೆ ಇರಾನ್ ಎಲ್ಲಾ ವೈದ್ಯರು ಮತ್ತು ದಾದಿಯರ ರಜೆಯನ್ನು ರದ್ದುಗೊಳಿಸಿ ತಕ್ಷಣ ಕರ್ತವ್ಯಕ್ಕೆ ಮರಳಬೇಕೆಂದು ಆದೇಶಿಸಿದೆ ಎಂದು ವರದಿಯಾಗಿದೆ.
ಇರಾನ್‌ನ ಉಪ ಆರೋಗ್ಯ ಸಚಿವರು ರಜೆಯಲ್ಲಿರುವ ಎಲ್ಲಾ ವೈದ್ಯರು ಮತ್ತು ದಾದಿಯರು ಕೆಲಸಕ್ಕೆ ಮರಳಬೇಕೆಂದು ಸೂಚಿಸಿದ್ದಾರೆ.
ʼವೈದ್ಯರು ಮತ್ತು ದಾದಿಯರ ರಜೆಗಳನ್ನು ರದ್ದುಪಡಿಸಲಾಗಿದೆ. ವೈದ್ಯಕೀಯ ಸೇವೆಗಳನ್ನು ಒದಗಿಸಲು ಮಾತ್ರವಲ್ಲದೆ ಚಿಕಿತ್ಸಾ ತಂಡಗಳ ನೈತಿಕತೆ ಮತ್ತು ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಲು ವೈದ್ಯಕೀಯ ಕೇಂದ್ರಗಳಲ್ಲಿ ಹಾಜರಿರುವಂತೆ ಕೇಳಿಕೊಳ್ಳಲಾಗಿದೆ ಎಂದು ಇರಾನ್‌ನ ಉಪ ಆರೋಗ್ಯ ಸಚಿವ ಸೆಯ್ಯದ್ ಸಜ್ಜದ್ ರಝಾವಿ ಹೇಳಿದರು.
ʼಆರೋಗ್ಯ ಸಚಿವಾಲಯವು ನಿಮ್ಮೊಂದಿಗಿದೆ. ಯಾವುದೇ ಅಗತ್ಯವಿದ್ದಲ್ಲಿ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ಸಿದ್ಧವಾಗಿದೆʼ ಎಂದು ರಝಾವಿ ತಸ್ನಿಮ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮೂಹಿಕವಾಗಿ ಸಾವುನೋವುಗಳು ಸಂಭವಿಸಿದಾಗ ಚಿಕಿತ್ಸೆ ನೀಡುವ ವಿಶೇಷ ಮಾರ್ಗದರ್ಶಿಗಳನ್ನು ವೈದ್ಯಕೀಯ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿದೆ ಎಂದು ರಝಾವಿ ಹೇಳಿದರು.