×
Ad

ಇರಾನ್‌ ನ ಪರಮಾಣು, ಕ್ಷಿಪಣಿ ಕಾರ್ಯಕ್ರಮಕ್ಕೆ ಸಂಬಂಧಿಸದ ತಾಣಗಳ ಮೇಲಿನ ದಾಳಿಯನ್ನು ನಿಲ್ಲಿಸಿ: ಇಸ್ರೇಲ್‌ಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಆಗ್ರಹ

Update: 2025-06-19 15:10 IST

 ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ (PTI)

ಪ್ಯಾರಿಸ್: ಪರಮಾಣು ಚಟುವಟಿಕೆಗಳು ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಸಂಬಂಧಿಸದ ಇರಾನ್‌ ನಲ್ಲಿನ ನೆಲೆಗಳ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಅವರು ಇಸ್ರೇಲ್ ಅನ್ನು ಒತ್ತಾಯಿಸಿದ್ದಾರೆ ಎಂದು ಅವರ ಅಧ್ಯಕ್ಷರ ಅಧಿಕೃತ ಕಚೇರಿ 'ಎಲಿಸೀ' ತಿಳಿಸಿದೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಮಾತುಕತೆಯ ಪರಿಹಾರ ಮಾರ್ಗವನ್ನು ಫ್ರಾನ್ಸ್, ಯುರೋಪಿಯನ್ ಒಕ್ಕೂಟದೊಂದಿಗೆ ಯೋಜಿಸುತ್ತಿದೆ ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕಚೇರಿ ಹೇಳಿದೆ.

ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ, ಮ್ಯಾಕ್ರನ್ ಅವರು ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್ ಅವರಿಗೆ ಮುಂಬರುವ ದಿನಗಳಲ್ಲಿ ಸಂಘರ್ಷವನ್ನು ಕೊನೆಗೊಳಿಸಲು, ಕದನ ವಿರಾಮವನ್ನು ಪ್ರಸ್ತಾಪಿಸಲು ಯುರೋಪಿಯನ್ ಒಕ್ಕೂಟದ ಪಾಲುದಾರರೊಂದಿಗೆ ಒಂದು ಉಪಕ್ರಮವನ್ನು ರೂಪಿಸಲು ಆದೇಶಿಸಿದರು ಎಂದು ಅದು ಹೇಳಿದೆ. ಆದರೆ ಯೋಜನೆಯ ಸ್ವರೂಪದ ಬಗ್ಗೆ ವಿವರಗಳನ್ನು ನೀಡಲು ಅದು ನಿರಾಕರಿಸಿದೆ.

"ಪ್ರಸ್ತುತ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಬಗ್ಗೆ ಮ್ಯಾಕ್ರನ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಇರಾನ್‌ ನ ಪರಮಾಣು ಅಥವಾ ಬ್ಯಾಲಿಸ್ಟಿಕ್ ಕಾರ್ಯಕ್ರಮಕ್ಕೆ ಸಂಬಂಧಿಸದ ನೆಲೆಗಳ ಮೇಲೆ ಹೆಚ್ಚಾಗಿ ದಾಳಿ ಮಾಡುತ್ತಿದೆ. ಇದರಿಂದ ಇರಾನ್ ಮತ್ತು ಇಸ್ರೇಲ್‌ ನಲ್ಲಿ ಹೆಚ್ಚು ನಾಗರಿಕರು ಸಂತ್ರಸ್ಥರಾಗುತ್ತಿದ್ದಾರೆ. ಪ್ರಾದೇಶಿಕ ಭದ್ರತೆಗೆ ಗಮನಾರ್ಹ ಅಪಾಯವನ್ನುಂಟು ಮಾಡುತ್ತಿರುವ ಈ ಮಿಲಿಟರಿ ಕಾರ್ಯಾಚರಣೆಗಳನ್ನು ತುರ್ತಾಗಿ ಕೊನೆಗೊಳಿಸುವುದು ಅಗತ್ಯ", ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರನ್ ಹೇಳಿದ್ದಾರೆ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ.

ಫ್ರೆಂಚ್ ನಾಗರಿಕರು ಇಸ್ರೇಲ್ ಅಥವಾ ಇರಾನ್‌ ನಿಂದ ಹೊರಹೋಗಲು ಬಯಸಿದರೆ ಅವರಿಗೆ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮ್ಯಾಕ್ರನ್ ಫ್ರೆಂಚ್ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದಾರೆ ಎಂದು ಎಲಿಸೀ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News