×
Ad

ಇರಾನ್‍ನಿಂದ ನನ್ನ ಜೀವಕ್ಕೆ ದೊಡ್ಡ ಬೆದರಿಕೆಯಿದೆ: ಟ್ರಂಪ್ ಆರೋಪ

Update: 2024-09-25 20:56 IST

 ಡೊನಾಲ್ಡ್ ಟ್ರಂಪ್ |  PC : PTI 

ವಾಷಿಂಗ್ಟನ್: ಇರಾನ್‍ನಿಂದ ನನ್ನ ಜೀವಕ್ಕೆ ದೊಡ್ಡ ಬೆದರಿಕೆಯಿದೆ ಮತ್ತು ದಾಳಿಕೋರನ `ಸಾವಿನ ಆಶಯ' ನನ್ನನ್ನು ಗುರಿಯಾಗಿಸುವುದು ಎಂದು ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ದೇಶದಲ್ಲಿ ಅವ್ಯವಸ್ಥೆಯನ್ನು ಬಿತ್ತುವ ಪ್ರಯತ್ನವಾಗಿ ಟ್ರಂಪ್ ಅವರ ಜೀವಕ್ಕೆ ಇರಾನ್‍ನಿಂದ ನಿಜವಾದ ಮತ್ತು ನಿರ್ದಿಷ್ಟ ಬೆದರಿಕೆಯ ಬಗ್ಗೆ ಗುಪ್ತಚರ ಏಜೆನ್ಸಿಗಳು ಮಾಹಿತಿ ನೀಡಿವೆ ಎಂದು ಟ್ರಂಪ್ ಚುನಾವಣಾ ಪ್ರಚಾರ ಕಾರ್ಯದ ನಿರ್ದೇಶಕರು ಹೇಳಿದ್ದಾರೆ. `ನನ್ನ ಜೀವಕ್ಕೆ ಇರಾನ್‍ನಿಂದ ದೊಡ್ಡ ಬೆದರಿಕೆಯಿದೆ. ಅಮೆರಿಕದ ಸಂಪೂರ್ಣ ಮಿಲಿಟರಿ ನೋಡುತ್ತಿದೆ ಮತ್ತು ಕಾಯುತ್ತಿದೆ. ಈ ನಿಟ್ಟಿನಲ್ಲಿ ಇರಾನ್ ಈಗಾಗಲೇ ಕ್ರಮ ಕೈಗೊಂಡರೂ ಅದು ಯಶಸ್ವಿಯಾಗಲಿಲ್ಲ. ಆದರೆ ಅವರು ಮತ್ತೊಮ್ಮೆ ಪ್ರಯತ್ನಿಸಲಿದ್ದಾರೆ. ಯಾರಿಗೂ ಒಳ್ಳೆಯ ಪರಿಸ್ಥಿತಿಯಿಲ್ಲ. ನಾನು ಹಿಂದೆಂದೂ ನೋಡಿರದ ಪ್ರಮಾಣದಲ್ಲಿ ನನ್ನನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದಾರೆ. ನನ್ನ ಭದ್ರತೆಗಾಗಿ ರಹಸ್ಯ ಸೇವಾ ಇಲಾಖೆಗೆ ಹೆಚ್ಚುವರಿ ಅನುದಾನ ಅನುಮೋದಿಸಿದ್ದಕ್ಕೆ ಸಂಸತ್‍ಗೆ ಧನ್ಯವಾದಗಳು. ಒಂದು ವಿಷಯದ ಬಗ್ಗೆ ರಿಪಬ್ಲಿಕನ್ನರು ಮತ್ತು ಡೆಮಾಕ್ರಟಿಕ್ ಪಕ್ಷದವರು ಒಮ್ಮತದ ನಿರ್ಧಾರಕ್ಕೆ ಬಂದಿರುವುದು ಉತ್ತಮ ಕ್ರಮವಾಗಿದೆ. ಮಾಜಿ ಅಧ್ಯಕ್ಷರ ಮೇಲೆ ದಾಳಿ ಮಾಡುವುದು ದಾಳಿಕೋರನ ಸಾವಿನ ಆಶಯವಾಗಿರಬಹುದು' ಎಂದವರು ಟ್ವೀಟ್ ಮಾಡಿದ್ದಾರೆ.

`ಟ್ರಂಪ್ ಅವರ ಹತ್ಯೆಯ ಬಗ್ಗೆ ಇರಾನ್‍ನಿಂದ ನಿಜವಾದ ಮತ್ತು ನಿರ್ದಿಷ್ಟ ಬೆದರಿಕೆ ಇರುವುದಾಗಿ ರಾಷ್ಟ್ರೀಯ ಗುಪ್ತಚರ ಸೇವೆಯ ನಿರ್ದೇಶಕರ ಕಚೇರಿಯಿಂದ ಮಾಹಿತಿ ಬಂದಿದೆ. ದೇಶದಲ್ಲಿ ಗೊಂದಲ ಮತ್ತು ಅವ್ಯವಸ್ಥೆ ಮೂಡಿಸಲು ಕಳೆದ ಕೆಲ ತಿಂಗಳಿಂದ ಈ ಸಂಘಟಿತ ಪ್ರಯತ್ನಗಳು ಮುಂದುವರಿದಿದೆ. ಟ್ರಂಪ್‍ರ ಸುರಕ್ಷತೆ ಮತ್ತು ನವೆಂಬರ್‍ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಸ್ತಕ್ಷೇಪ ತಡೆಯಲು ಕಾನೂನು ಜಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಟ್ರಂಪ್ ಅವರ ಚುನಾವಣಾ ಪ್ರಚಾರ ಕಾರ್ಯದ ನಿರ್ದೇಶಕ ಸ್ಟೀವನ್ ಚೆಯುಂಗ್ ಹೇಳಿದ್ದಾರೆ.

ಜುಲೈ 13ರಂದು ಪೆನಿಸಿಲ್ವೇನಿಯಾದ ಪ್ರಚಾರ ರ್ಯಾಲಿಯಲ್ಲಿ ಮತ್ತು ಸೆಪ್ಟಂಬರ್ 15ರಂದು ಫ್ಲೋರಿಡಾದ ಗಾಲ್ಫ್‍ಕ್ಲಬ್‍ನಲ್ಲಿ ಟ್ರಂಪ್ ಹತ್ಯೆಗೆ ಪ್ರಯತ್ನ ನಡೆದಿರುವುದಾಗಿ ವರದಿಯಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News