×
Ad

ಪರಮಾಣು ಕುರಿತು ಇರಾನ್-ಅಮೆರಿಕ ನಡುವೆ 4ನೇ ಸುತ್ತಿನ ಮಾತುಕತೆ

Update: 2025-05-11 23:06 IST

ಮಸ್ಕತ್: ಇರಾನ್ ವೇಗವಾಗಿ ಮುಂದುವರಿಸುತ್ತಿರುವ ಪರಮಾಣು ಕಾರ್ಯಕ್ರಮದ ಬಗ್ಗೆ ಒಮಾನ್ ರಾಜಧಾನಿ ಮಸ್ಕತ್ನಲ್ಲಿ ರವಿವಾರ ಅಮೆರಿಕ ಮತ್ತು ಇರಾನ್ನ ಉನ್ನತ ಮಟ್ಟದ ನಿಯೋಗದ ನಡುವೆ ನಾಲ್ಕನೇ ಸುತ್ತಿನ ಮಾತುಕತೆ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮಾತುಕತೆ ಆರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ `ನಾಗರಿಕ ಉದ್ದೇಶಗಳಿಗಾಗಿ ಯುರೇನಿಯಂ ಅಭಿವೃದ್ಧಿಪಡಿಸುವ ಹಕ್ಕು ಮತ್ತು ನಾಗರಿಕ ಉದ್ದೇಶಗಳಿಗಾಗಿ ಪರಮಾಣು ಪುಷ್ಟೀಕರಣದ ಕಾನೂನುಬದ್ಧ ಹಕ್ಕನ್ನು ಇರಾನ್ ಹೊಂದಿದ್ದು ಅದನ್ನು ಯಾವುದೇ ಒಪ್ಪಂದಕ್ಕೆ ಒಳಪಡಿಸಲಾಗದು. ಪರಮಾಣು ಪುಷ್ಟೀಕರಣ ಇರಾನ್ ರಾಷ್ಟ್ರದ ಸಾಧನೆ ಮತ್ತು ಗೌರವವಾಗಿದೆ. ಇದಕ್ಕಾಗಿ ನಾವು ಬಹಳಷ್ಟು ಕಷ್ಟಪಟ್ಟಿದ್ದೇವೆ. ಈ ಸಾಧನೆಗಾಗಿ ನಮ್ಮ ಪರಮಾಣು ವಿಜ್ಞಾನಿಗಳ ರಕ್ತವನ್ನೂ ಚೆಲ್ಲಲಾಗಿದೆ. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ನಾವು ಪರಮಾಣು ಬಾಂಬ್ ಅಭಿವೃದ್ಧಿಪಡಿಸುವುದಿಲ್ಲ ಎಂಬ ಪರಿಶೀಲಿಸಬಹುದಾದ ಭರವಸೆಗಳನ್ನು ನೀಡಲು ಇರಾನ್ ಬದ್ಧವಾಗಿದೆ ' ಎಂದು ಹೇಳಿರುವುದಾಗಿ ವರದಿಯಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ನೇತೃತ್ವದ ಅಮೆರಿಕ ನಿಯೋಗ ಹಾಗೂ ಇರಾನ್ ನಿಯೋಗದ ನಡುವೆ ಒಮಾನ್ ಮಧ್ಯಸ್ಥಿಕೆಯಲ್ಲಿ ಪರೋಕ್ಷವಾಗಿ ಮಾತುಕತೆ ನಡೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News