ಅಲ್ ಉದೈದ್ ದಾಳಿಯ ಬಗ್ಗೆ ಇರಾನ್ ಅಮೆರಿಕಕ್ಕೆ ಮುನ್ಸೂಚನೆ ನೀಡಿತ್ತು: ಟ್ರಂಪ್
PC: x.com/TRTWorldNow
ವಾಷಿಂಗ್ಟನ್: ಖತರ್ ನಲ್ಲಿರುವ ಅಲ್ ಉದೈದ್ ವಾಯುನೆಲೆಯ ಮೇಲೆ ಇರಾನ್ ದಾಳಿ ನಡೆಸುವ ಮುನ್ಸೂಚನೆ ನಮಗೆ ಮೊದಲೇ ಸಿಕ್ಕಿತ್ತು ಎಂದು ಅಮೆರಿಕದ ಅಧ್ಯಕ್ಷ ರೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಅಮೆರಿಕದ ವಾಯುನೆಲೆಯ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯನ್ನು ದುರ್ಬಲ ಎಂದು ಕರೆದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.
ಇರಾನ್ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಯಾವುದೇ ಅಮೆರಿಕದ ಪ್ರಜೆಗಳಿಗೆ ಹಾನಿಯಾಗಿಲ್ಲ ಎಂದು ಹೇಳಲು ನನಗೆ ಸಂತೋಷವಾಗಿದೆ. ಅವರ ಆಕ್ರೋಶ ಹೊರಬಂದಿದೆ. ಮುಂದೆ ಯಾವುದೇ ದ್ವೇಷ ಇರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ದಾಳಿಯ ಬಗ್ಗೆ ಮುನ್ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ಇದರಿಂದಾಗಿ ಯಾರಿಗೂ ಗಾಯಗಳಾಗಿಲ್ಲ ಯಾರ ಜೀವಕ್ಕೂ ಹಾನಿಯಾಗಿಲ್ಲ. ಬಹುಶಃ ಇರಾನ್ ಈಗ ಈ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಮುಂದಡಿ ಇಡಬಹುದು. ಇಸ್ರೇಲ್‌ಗೆ ಕೂಡ ಅದೇ ರೀತಿ ಮಾಡಲು ನಾನು ಪ್ರೋತ್ಸಾಹಿಸುತ್ತೇನೆ," ಎಂದು ಟ್ರಂಪ್ ಹೇಳಿದ್ದಾರೆ.
ಈ ಮಧ್ಯೆ, ಇರಾನ್ ನ ಖತರ್ ಮೇಲೆ ನಡೆಸಿದ ದಾಳಿಯಲ್ಲಿ ಒಂದು ಕ್ಷಿಪಣಿಯು ಅಲ್ ಉದೈದ್ ವಾಯುನೆಲೆಗೆ ಅಪ್ಪಳಿಸಿದೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಖತರ್ ಹೇಳಿದೆ
ಇರಾನ್ ನಿಂದ ಒಟ್ಟು 19 ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಖತರ್ ದೃಢಪಡಿಸಿದೆ. ಅವುಗಳಲ್ಲಿ ಒಂದು ಮಾತ್ರ ಅಲ್ ಉದೈದ್ ವಾಯುನೆಲೆಗೆ ಅಪ್ಪಳಿಸಿದೆ ಎಂದು ತಿಳಿದು ಬಂದಿದೆ.