ಸಂಘರ್ಷದಲ್ಲಿ ನೇರ ಹಸ್ತಕ್ಷೇಪದ ವಿರುದ್ಧ ಅಮೆರಿಕಕ್ಕೆ ಇರಾನ್ ಎಚ್ಚರಿಕೆ
PC : PTI
ಟೆಹ್ರಾನ್: ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷದಲ್ಲಿ ಯಾವುದೇ ನೇರ ಹಸ್ತಕ್ಷೇಪದ ವಿರುದ್ಧ ಅಮೆರಿಕಕ್ಕೆ ಇರಾನ್ ಗುರುವಾರ ಎಚ್ಚರಿಕೆ ನೀಡಿದ್ದು, ಒಂದು ವೇಳೆ ತನ್ನ ಮಿತ್ರರಾಷ್ಟ್ರ ಇಸ್ರೇಲ್‍ಗೆ ಮಿಲಿಟರಿ ಬೆಂಬಲ ನೀಡಲು ಅಮೆರಿಕ ಮುಂದಾದರೆ ತನ್ನ ಎದುರು ಎಲ್ಲಾ ಆಯ್ಕೆಗಳೂ ಇವೆ ಎಂದು ಹೇಳಿದೆ.
ಅಮೆರಿಕ ಮಧ್ಯಪ್ರವೇಶಿಸಿದರೆ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳಲಿದೆ. ಸಂಘರ್ಷ ಉಲ್ಬಣಿಸಿದರೆ ಇಸ್ಲಾಮಿಕ್ ರಿಪಬ್ಲಿಕ್(ಇರಾನ್) ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿದ್ಧವಾಗಿದೆ ಎಂದು ಇರಾನ್‍ನ ಸಹಾಯಕ ವಿದೇಶಾಂಗ ಸಚಿವರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಮೆರಿಕ ಸಕ್ರಿಯ ಪಾತ್ರ ನಿರ್ವಹಿಸಿದರೆ ಅದಕ್ಕೆ ಬಲಿಷ್ಠ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಇರಾನ್ ಸಿದ್ಧವಾಗಿರುವುದನ್ನು ಈ ಎಚ್ಚರಿಕೆ ಪ್ರತಿಧ್ವನಿಸಿದೆ ಎಂದು ವರದಿ ಹೇಳಿದೆ.
ಇಸ್ರೇಲ್ ಪರವಾಗಿ ಸಕ್ರಿಯವಾಗಿ ಕಣಕ್ಕಿಳಿಯಲು ಅಮೆರಿಕ ಬಯಸಿದರೆ, ಆಕ್ರಮಣಕಾರರಿಗೆ ಪಾಠ ಕಲಿಸಲು ಮತ್ತು ತನ್ನ ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಇರಾನ್ ತನ್ನ ಸಾಧನಗಳನ್ನು ಬಳಸಬೇಕಾಗುತ್ತದೆ. ಸ್ವಾಭಾವಿಕವಾಗಿ, ನಮ್ಮ ಮಿಲಿಟರಿ ನಿರ್ಧಾರ ತೆಗೆದುಕೊಳ್ಳುವವರ ಎದುರು ಅಗತ್ಯವಿರುವ ಎಲ್ಲಾ ಆಯ್ಕೆಗಳೂ ಇವೆ ಎಂದು ಇರಾನ್‍ನ ವಿದೇಶಾಂಗ ಇಲಾಖೆ ಹೇಳಿದೆ.
ಇದಕ್ಕೂ ಮುನ್ನ ಅಲ್ ಜಝೀರಾ ವಾಹಿನಿಯಲ್ಲಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯಿ, ಇಸ್ರೇಲ್ ಗೆ ಬೆಂಬಲವಾಗಿ ಯಾವುದೇ ನೇರ ಹಸ್ತಕ್ಷೇಪವು ಪೂರ್ಣ ಪ್ರಮಾಣದ ಪ್ರಾದೇಶಿಕ ಸಂಘರ್ಷದ ಕಿಡಿ ಹೊತ್ತಿಸಬಹುದು. ಅಮೆರಿಕದ ಮಧ್ಯಪ್ರವೇಶವು ವಲಯದಲ್ಲಿ ಪೂರ್ಣಪ್ರಮಾಣದ ಯುದ್ಧಕ್ಕೆ ಆಹ್ವಾನವಾಗಬಹುದು ಎಂದು ಎಚ್ಚರಿಕೆ ನೀಡಿದ್ದರು.
ಈ ಮಧ್ಯೆ, ಅಮೆರಿಕವು ಮಧ್ಯಪ್ರಾಚ್ಯ ವಲಯಕ್ಕೆ ಹೆಚ್ಚುವರಿ ಯುದ್ಧವಿಮಾನಗಳನ್ನು ನಿಯೋಜಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಗೆ ಇರಾನ್ ರಾಯಭಾರಿ ಅಲಿ ಬಹ್ರೇನಿ `ಒಂದು ವೇಳೆ ತನ್ನ ಪ್ರದೇಶದ ಮೇಲಿನ ದಾಳಿಯಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಿದೆ ಎಂದು ಇರಾನ್ ನಿರ್ಧರಿಸಿದರೆ , ನಾವು ಅಮೆರಿಕಕ್ಕೆ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತೇವೆ' ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.