ಅಮೆರಿಕ ನೌಕಾ ನೆಲೆಗಳ ಮೇಲೆ ಇರಾನ್ ದಾಳಿಯ ಭೀತಿ: ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಬಹುತೇಕ ಸರಕಾರಿ ನೌಕರರಿಗೆ ಬಹರೇನ್ ಸೂಚನೆ
PC : X\ @USNavy
ಮನಾಮ: ಇರಾನ್ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸಿದ ನಂತರ, ಪ್ರಮುಖ ಅಮೆರಿಕ ನೌಕಾ ನೆಲೆಯೊಂದಕ್ಕೆ ಸ್ಥಳಾವಕಾಶ ಒದಗಿಸಿರುವ ಬಹರೇನ್, ಮುಂದಿನ ಸೂಚನೆಯವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ತನ್ನ ಬಹುತೇಕ ಸರಕಾರಿ ನೌಕರರಿಗೆ ಆದೇಶಿಸಿದೆ.
“ಶೇ. 90ರಷ್ಟು ಮನೆಯಿಂದಲೇ ಕಾರ್ಯನಿರ್ವಹಿಸುವ ಸಾಮರ್ಥ್ಯಕ್ಕೆ ಚಾಲನೆ ನೀಡುವುದರೊಂದಿಗೆ, ದೇಶದ ಎಲ್ಲ ಸಚಿವಾಲಯಗಳು ಹಾಗೂ ಸರಕಾರಿ ಸಂಸ್ಥೆಗಳಲ್ಲಿ ದೂರ ನಿಯಂತ್ರಿತ ಕೆಲಸ ನಿರ್ವಹಣೆ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ” ಎಂದು ಪ್ರಾಂತೀಯ ಸನ್ನಿವೇಶಗಳು ಹಾಗೂ ಹಾಲಿ ಬೆಳವಣಿಗೆಗಳನ್ನು ಉಲ್ಲೇಖಿಸಿ ಬಹರೇನ್ ನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ನ ಪ್ರಮುಖ ಪರಮಾಣು ಸ್ಥಾವರಗಳಾದ ಫೊರ್ದೊ, ನತಾಂಝ್ ಹಾಗೂ ಇಸ್ಫಹಾನ್ ಮೇಲೆ ರವಿವಾರ ಅಮೆರಿಕ ಸಮನ್ವಯದ ವಾಯು ದಾಳಿಗಳನ್ನು ನಡೆಸಿದ್ದರಿಂದ, ಇರಾನ್ ಗೆ ಗಮನಾರ್ಹ ಹಿನ್ನಡೆಯುಂಟಾಗಿದೆ. ನಂತರ, ಈ ದಾಳಿಗಳನ್ನು ದೃಢಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಾಂತೀಯ ಸಂಘರ್ಷ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಈ ದಾಳಿಗಳು ನಿರ್ಣಾಯಕವಾಗಿವೆ ಎಂದು ಬಣ್ಣಿಸಿದ್ದಾರೆ.
ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಶನಿವಾರ ಒಂಭತ್ತನೆ ದಿನಕ್ಕೆ ಕಾಲಿಟ್ಟಿದ್ದು, ಈ ಸಂಘರ್ಷದಲ್ಲಿ ಇದೀಗ ಇಸ್ರೇಲ್ ಬೆಂಬಲಕ್ಕೆ ಅಮೆರಿಕ ಕೂಡಾ ಧಾವಿಸಿದೆ. ಈ ನಡುವೆ, ಇಸ್ರೇಲ್ ನಲ್ಲಿನ ಗಾಯಗೊಂಡಿರುವ ಇಸ್ರೇಲ್ ಪ್ರಜೆಗಳ ಮೇಲೆ ಇರಾನ್ ನ ಕ್ಷಿಪಣಿ ದಾಳಿ ನಡೆದ ನಂತರ, ರವಿವಾರ ಪಶ್ಚಿಮ ಇರಾನ್ ನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸರಣಿ ವಾಯು ದಾಳಿಗಳನ್ನು ನಡೆಸಿತು.