ಇರಾಕ್: ಸೂಪರ್ ಮಾರ್ಕೆಟ್ ನಲ್ಲಿ ಬೆಂಕಿ ದುರಂತ ; ಕನಿಷ್ಠ 69 ಮಂದಿ ಮೃತ್ಯು
pc : aljazeera.com
ಬಗ್ದಾದ್, ಜು.17: ದಕ್ಷಿಣ ಇರಾಕಿನ ಅಲ್-ಕುಟ್ ನಗರದ ಸೂಪರ್ ಮಾರ್ಕೆಟ್‍ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 69 ಮಂದಿ ಸಾವನ್ನಪ್ಪಿದ್ದು ಇತರ 11 ಮಂದಿ ನಾಪತ್ತೆಯಾಗಿರುವುದಾಗಿ ನಗರದ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.
ಐದು ಅಂತಸ್ತಿನ ಕಟ್ಟಡದ ತಳ ಅಂತಸ್ತಿನಲ್ಲಿ ಸುಗಂಧ ದೃವ್ಯ ಮತ್ತು ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುತ್ತಿದ್ದು ಇಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಕಟ್ಟಡದ ಇತರೆಡೆ ವ್ಯಾಪಿಸಿದೆ. ಕಟ್ಟಡದೊಳಗಿದ್ದ 45 ಮಂದಿಯನ್ನು ರಕ್ಷಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಪಡೆ ಕಾರ್ಯಾಚರಣೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಒಂದು ವಾರದ ಹಿಂದೆಯಷ್ಟೇ ಆರಂಭಗೊಂಡಿದ್ದ ಮಾಲ್ ನಲ್ಲಿ ಹೋಟೆಲ್ ಹಾಗೂ ಸೂಪರ್ ಮಾರ್ಕೆಟ್ ಇದೆ. ಬೆಂಕಿಯಲ್ಲಿ 69 ಮಂದಿ ಸಾವನ್ನಪ್ಪಿದ್ದು ಇತರ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಇರಾಕಿ ನ್ಯೂಸ್ ಏಜೆನ್ಸಿ(ಐಎನ್‍ಎ) ವರದಿ ಮಾಡಿದೆ.
ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡುವಂತೆ ಆಂತರಿಕ ಸಚಿವರಿಗೆ ಸೂಚಿಸಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಇರಾಕ್ ಪ್ರಧಾನಿ ಮುಹಮ್ಮದ್ ಶಿಯಾ ಅಲ್-ಸುಡಾನಿ ಹೇಳಿದ್ದಾರೆ.