48 ಗಂಟೆಗಳ ಕದನ ವಿರಾಮಕ್ಕೆ ಅಫ್ಘಾನಿಸ್ತಾನದಿಂದ ಒಪ್ಪಿಗೆ: ಪಾಕಿಸ್ತಾನ
Photo Credit : X \ @abhishekjha157
ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಮೇಲೆ ಪಾಕಿಸ್ತಾನ ವಾಯು ದಾಳಿ ನಡೆಸಿದ ಬಳಿಕ, ಪಾಕಿಸ್ತಾನ ಮತ್ತು ಅಫ್ಘನ್ ತಾಲಿಬಾನ್ ಆಡಳಿತದ ನಡುವೆ ಬುಧವಾರ ಪಾಕಿಸ್ತಾನದ ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯಿಂದ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಒಪ್ಪಂದವಾಗಿದೆ ಎಂದು ಪಾಕಿಸ್ತಾನ ಹೇಳಿದೆ.
ಇದಕ್ಕೂ ಮುನ್ನ, ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಬುಧವಾರ ಪಾಕಿಸ್ತಾನ ವಾಯು ದಾಳಿ ನಡೆಸಿದ್ದರಿಂದ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಸ್ಫೋಟಗೊಂಡಿತ್ತು.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಸಂಕೀರ್ಣ, ಆದರೂ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗೆ ಮಾತುಕತೆಯ ಮೂಲಕ ಸಕಾರಾತ್ಮಕ ಪರಿಹಾರ ಕಂಡುಕೊಳ್ಳಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳೆರಡೂ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಿವೆ ಎಂದು ಹೇಳಿದೆ.
ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇನಾ ಪಡೆಗಳ ನಡುವೆ ಏರ್ಪಟ್ಟ ಸಂಘರ್ಷದಲ್ಲಿ 12 ಮಂದಿ ಅಫ್ಘಾನ್ ನಾಗರಿಕರನ್ನು ಪಾಕಿಸ್ತಾನ ಸೇನಾಪಡೆ ಹತ್ಯೆಗೈದಿದೆ ಎಂದು ವರದಿಯಾಗಿತ್ತು. ಬಳಿಕ, ಬುಧವಾರ ಮಧ್ಯಾಹ್ನದ ಹೊತ್ತಿಗೆ ಪಾಕಿಸ್ತಾನ ಸೇನಾಪಡೆಯು 40 ಮಂದಿ ಅಫ್ಘಾನ್ ತಾಲಿಬಾನ್ ದಾಳಿಕೋರರನ್ನು ಹತ್ಯೆಗೈದಿದೆ ಎಂದು ಹೇಳಲಾಗಿತ್ತು.