ಪಾಕಿಸ್ತಾನ, ಚೀನಾಕ್ಕಿಂತಲೂ ಕಡಿಮೆ ಸುಂಕ: ಭಾರತಕ್ಕೆ ಅಮೆರಿಕದಿಂದ ಅನುಕೂಲಕರ ನಿರ್ಧಾರ
PC: x.com/IndianTechGuide
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಮಾತುಕತೆ ಬಳಿಕ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದಾಗಿ ಪ್ರಕಟಿಸಲಾಗಿದೆ. ಇದರಂತೆ, ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಎಲ್ಲ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತಿದ್ದ ಶೇಕಡ 25ರ ಪ್ರತಿಸುಂಕವನ್ನು ಶೇಕಡ 18ಕ್ಕೆ ಇಳಿಸಲಾಗಿದೆ. ಇದೇ ವೇಳೆ, ಅಮೆರಿಕದಿಂದ ಭಾರತಕ್ಕೆ ರಫ್ತು ಮಾಡುವ ಸರಕುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕ ಅಧ್ಯಕ್ಷರ ಈ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಸುಂಕ ಕಡಿತ ನಿರ್ಧಾರಕ್ಕಾಗಿ ಭಾರತದ 140 ಕೋಟಿ ಜನರ ಪರವಾಗಿ ಟ್ರಂಪ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಆರ್ಥಿಕತೆ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡಿದಾಗ, ನಮ್ಮ ಜನರಿಗೆ ಲಾಭವಾಗಲಿದ್ದು, ಉಭಯ ರಾಷ್ಟ್ರಗಳಿಗೆ ಪ್ರಯೋಜನಕಾರಿಯಾದ ಸಹಕಾರದ ಅಪಾರ ಅವಕಾಶಗಳು ಅನಾವರಣಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
ಹೊಸ ನಿರ್ಧಾರದಂತೆ ಭಾರತ ಪಾವತಿಸಬೇಕಾದ ಸುಂಕ ತನ್ನ ನೆರೆಯ ಹಾಗೂ ಇತರ ರಾಷ್ಟ್ರಗಳಿಗಿಂತಲೂ ಕಡಿಮೆಯಾಗಿದೆ. ಉದಾಹರಣೆಗೆ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ಶೇಕಡ 19ರಷ್ಟು, ವಿಯೇಟ್ನಾಂ ಶೇಕಡ 20ರಷ್ಟು ಸುಂಕ ಪಾವತಿಸುತ್ತಿವೆ. ಇದೇ ವೇಳೆ ಬಾಂಗ್ಲಾದೇಶ ಶೇಕಡ 20ರಷ್ಟು ಸುಂಕವನ್ನು ಪಾವತಿಸುತ್ತಿದ್ದು, ಚೀನಾದಿಂದ ರಫ್ತಾಗುವ ವಸ್ತುಗಳು ಶೇಕಡ 30ರಿಂದ 35ರಷ್ಟು ಸುಂಕವನ್ನು ಆಕರ್ಷಿಸುತ್ತಿವೆ.
ಅಮೆರಿಕದ ‘ವಿಮೋಚನಾ ದಿನ’ ಎಂದು ಕರೆಯಲ್ಪಡುವ 2025ರ ಏಪ್ರಿಲ್‌ನಲ್ಲಿ ಟ್ರಂಪ್ ಪ್ರತಿಸುಂಕ ಘೋಷಿಸಿದಾಗ, ಭಾರತದ ಮೇಲೆ ಶೇಕಡ 26ರಷ್ಟು ಸುಂಕ ವಿಧಿಸುವುದಾಗಿ ಪ್ರಕಟಿಸಿದ್ದರು. ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ನಡೆದ ಬಳಿಕ 2025ರ ಆಗಸ್ಟ್‌ನಿಂದ ಇದನ್ನು ಶೇಕಡ 25ಕ್ಕೆ ಇಳಿಸಲಾಗಿತ್ತು. ನಂತರ ರಷ್ಯಾದಿಂದ ತೈಲ ಆಮದು ಮಾಡುವ ಹಿನ್ನೆಲೆಯಲ್ಲಿ ಭಾರತದ ಮೇಲಿನ ಸುಂಕವನ್ನು ಶೇಕಡ 50ಕ್ಕೆ ಏರಿಸಲಾಗಿತ್ತು.
ಇದೀಗ ಶೇಕಡ 18ರಷ್ಟು ಪ್ರತಿಸುಂಕವನ್ನು ಘೋಷಿಸಲಾಗಿದ್ದು, ರಷ್ಯಾದಿಂದ ತೈಲ ಆಮದು ಮಾಡುವ ಕಾರಣಕ್ಕಾಗಿ ವಿಧಿಸಿದ್ದ ಶೇಕಡ 25ರ ಹೆಚ್ಚುವರಿ ಸುಂಕವೂ ರದ್ದಾಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ ಹಾಗೂ ಅಮೆರಿಕದಿಂದ ರಫ್ತಾಗುವ ಸರಕುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ.