×
Ad

ಅಮೆರಿಕದ ಗುಪ್ತಚರ ಮಾಹಿತಿ ಸೋರಿಕೆ | ಇರಾನ್ ಮೇಲೆ ದಾಳಿ ಮಾಡುವ ಇಸ್ರೇಲ್ ಯೋಜನೆಗಳ ದಾಖಲೆ ಬಹಿರಂಗ : ವರದಿ

Update: 2024-10-20 21:34 IST

PC : aljazeera.com

ವಾಶಿಂಗ್ಟನ್ : ಇರಾನ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಯೋಜನೆಗಳನ್ನು ಒಳಗೊಂಡ ಗುಪ್ತಚರ ವರದಿಯ ಮಹತ್ವದ ದಾಖಲೆಗಳು ಸೋರಿಕೆಯಾಗಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ದಾಖಲೆ ಸೋರಿಕೆ ಅತ್ಯಂತ ಕಳವಳಕಾರಿಯಾಗಿದೆ. ಅಕ್ಟೋಬರ್ 15 ಮತ್ತು 16ರ ದಿನಾಂಕ ಹೊಂದಿರುವ ಈ ದಾಖಲೆಗಳು ಶುಕ್ರವಾರ ಟೆಲಿಗ್ರಾಮ್ ನಲ್ಲಿ `ಮಿಡ್ಲ್ ಈಸ್ಟ್ ಸ್ಪೆಕ್ಟೇಟರ್' ಎಂಬ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ಆನ್ಲೈನ್ನಲ್ಲಿ ಪ್ರಸಾರವಾಗಿವೆ. `ಅತೀ ಗೌಪ್ಯ' ಎಂದು ಗುರುತಿಸಲಾದ ಈ ಮಾಹಿತಿಯು ಅಮೆರಿಕ ಮತ್ತು ಅದರ `ಫೈವ್ ಐಸ್(ಐದು ಕಣ್ಣುಗಳು) ಗುಪ್ತಚರ ಒಕ್ಕೂಟದ ಸದಸ್ಯರಾದ ಆಸ್ಟ್ರೇಲಿಯಾ, ಕೆನಡಾ, ನ್ಯೂಝಿಲ್ಯಾಂಡ್ ಮತ್ತು ಬ್ರಿಟನ್‌ ಗಳು ಮಾತ್ರ ನೋಡಬಹುದು ಎಂಬ ಟಿಪ್ಪಣಿಯನ್ನು ಹೊಂದಿತ್ತು ಎಂದು ವರದಿಯಾಗಿದೆ.

ಈ ವರದಿಯಲ್ಲಿ ಇರಾನ್ ವಿರುದ್ಧದ ದಾಳಿಗೆ ಇಸ್ರೇಲ್ ಮಾಡುತ್ತಿರುವ ಸಿದ್ಧತೆಗಳನ್ನು ವಿವರಿಸಲಾಗಿದೆ. `ನ್ಯಾಷನಲ್ ಜಿಯೊಸ್ಪೇಷಿಯಲ್ ಇಂಟೆಲಿಜೆನ್ಸ್ ಏಜೆನ್ಸಿ'ಯಿಂದ ಇದನ್ನು ಸಂಕಲಿಸಲಾಗಿದೆ ಎನ್ನಲಾದ ಒಂದು ದಾಖಲೆಯಲ್ಲಿ ಇಸ್ರೇಲ್ ಯುದ್ಧ ಸಾಮಾಗ್ರಿಗಳನ್ನು ರವಾನಿಸುತ್ತಿರುವ ಮಾಹಿತಿಯಿದೆ. ರಾಷ್ಟ್ರೀಯ ಭದ್ರತಾ ಏಜೆನ್ಸಿ ಮೂಲಗಳನ್ನು ಉಲ್ಲೇಖಿಸಿದೆ ಎನ್ನಲಾದ ಮತ್ತೊಂದು ದಾಖಲೆಯಲ್ಲಿ ಗಾಳಿಯಿಂದ ಮೇಲ್ಮೈಗೆ ಕ್ಷಿಪಣಿಗಳನ್ನು ಒಳಗೊಂಡಿರುವ ಇಸ್ರೇಲ್ ವಾಯುಪಡೆಯ ಕವಾಯತನ್ನು ವಿವರಿಸಲಾಗಿದೆ.

ಸೋರಿಕೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗುಪ್ತಚರ ಏಜೆನ್ಸಿಯ ಸದಸ್ಯರಿಂದ ಸೋರಿಕೆಯಾಗಿದೆಯೇ ಅಥವಾ ಹ್ಯಾಕ್ನಂತಹ ಮತ್ತೊಂದು ವಿಧಾನದಿಂದ ಪಡೆಯಲಾಗಿದೆಯೇ ಎಂಬುದನ್ನು ತನಿಖೆಯು ಪರಿಶೀಲಿಸುತ್ತಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News