×
Ad

ಇರಾನ್‌ ನ ವಿಶ್ವದ ಬೃಹತ್ ಅನಿಲ ನಿಕ್ಷೇಪದ ಮೇಲೆ ಇಸ್ರೇಲ್ ಬಾಂಬ್ ದಾಳಿ: ಇದರಿಂದಾಗಲಿರುವ ಜಾಗತಿಕ ಪರಿಣಾಮಗಳೇನು?

Update: 2025-06-15 19:58 IST

PC : NDTV 

ಹೊಸದಿಲ್ಲಿ: ಶನಿವಾರ ವಿಶ್ವದ ಅತ್ಯಂತ ಬೃಹತ್ ಅನಿಲ ನಿಕ್ಷೇಪವಾದ ದಕ್ಷಿಣ ಪಾರ್ಸ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದಾಗಿ, ಅದರ ಪ್ರಮುಖ ಘಟಕವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಪರಿಣಾಮ, ಇರಾನ್ ಅನಿವಾರ್ಯವಾಗಿ ಅನಿಲ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿದೆ.

ಸಮುದ್ರ ತೀರದ ಆಚೆಯಿರುವ 14ನೇ ಹಂತದ ಘಟಕದ ಮೇಲೆ ನಡೆದ ಈ ವೈಮಾನಿಕ ದಾಳಿಯಿಂದಾಗಿ, ಪ್ರತಿ ದಿನ ಉತ್ಪಾದನೆಯಾಗುತ್ತಿದ್ದ 12 ದಶಲಕ್ಷ ಘನ ಮೀಟರ್‌ನಷ್ಟು ಅನಿಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇದು ಇರಾನ್‌ ನ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ನಡೆಸಿರುವ ಮೊಟ್ಟಮೊದಲ ನೇರ ವೈಮಾನಿಕ ದಾಳಿಯಾಗಿದೆ.

ಇರಾನ್‌ ನ ಬುಶೆಹರ್ ಪ್ರಾಂತ್ಯದ ಸಮುದ್ರ ತೀರದಿಂದ ಹೊರಗಿರುವ ಹಾಗೂ ಖತರ್‌ ನೊಂದಿಗೆ ಗಡಿ ಹಂಚಿಕೊಂಡಿರುವ (ತನ್ನ ಉತ್ತರದ ನಿಕ್ಷೇಪದ ಭಾಗ ಎಂದು ಕರೆದುಕೊಂಡಿರುವ) ದಕ್ಷಿಣ ಪಾರ್ಸ್ ಅನಿಲ ನಿಕ್ಷೇಪವು ವಿಶ್ವದ ಅತ್ಯಂತ ಬೃಹತ್ ಮೀಸಲು ಅನಿಲ ನಿಕ್ಷೇಪವಾಗಿದೆ. ಈ ಅನಿಲ ನಿಕ್ಷೇಪವು ವಿದ್ಯುಚ್ಛಕ್ತಿ, ಬಿಸಿಯಾಗಿಸುವಿಕೆ ಹಾಗೂ ಪೆಟ್ರೊಕೆಮಿಕಲ್‌ನಂತಹ ಉತ್ಪಾದನೆಗಳಿಗೆ ಅತ್ಯಗತ್ಯವಾಗಿರುವ ಇರಾನ್‌ ನ ಶೇ. 66ರಷ್ಟು ಸ್ವದೇಶಿ ಅನಿಲ ಬೇಡಿಕೆಯನ್ನು ಪೂರೈಸುತ್ತಿದೆ.

ಅಮೆರಿಕ ಹಾಗೂ ರಷ್ಯ ನಂತರ, ಅನಿಲ ಉತ್ಪಾದನೆಯಲ್ಲಿ ಇರಾನ್ ವಿಶ್ವದ ಮೂರನೆಯ ಬೃಹತ್ ದೇಶವಾಗಿದ್ದು, ವಾರ್ಷಿಕ 275 ಶತಕೋಟಿ ಘನ ಮೀಟರ್ ಅನಿಲವನ್ನು ಉತ್ಪಾದಿಸುತ್ತಿದೆ. ಇದು ಜಾಗತಿಕ ಉತ್ಪಾದನೆಯ ಶೇ. 6.5ರಷ್ಟಾಗಿದೆ.

ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳಿಂದ, ಈ ಪೈಕಿ ಕೆಲ ಭಾಗವನ್ನು ಇರಾಕ್‌ ನಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದರೂ, ಬಹುತೇಕ ಅನಿಲವನ್ನು ದೇಶೀಯವಾಗಿಯೇ ಬಳಕೆ ಮಾಡಲಾಗುತ್ತಿದೆ.

ಇದೇ ಅನಿಲ ನಿಕ್ಷೇಪದಿಂದ ಖತರ್ ದೇಶವು ಶೆಲ್ ಹಾಗೂ ಎಕ್ಸಾನ್‌ ಮೊಬಿಲ್‌ ನಂತಹ ಮುಂಚೂಣಿ ಜಾಗತಿಕ ಇಂಧನ ಸಂಸ್ಥೆಗಳ ನೆರವಿನೊಂದಿಗೆ ಪ್ರತಿ ವರ್ಷ ಯೂರೋಪ್ ಹಾಗೂ ಏಷ್ಯಗಳಿಗೆ 77 ದಶಲಕ್ಷ ಟನ್‌ ಗಳಷ್ಟು ದ್ರವೀಕೃತ ನೈಸರ್ಗಿಕ ಅನಿಲವನ್ನು ರಫ್ತು ಮಾಡುತ್ತಿದೆ.

ಇಲ್ಲಿಯವರೆಗೆ ಇಸ್ರೇಲ್‌ ನ ವೈಮಾನಿಕ ದಾಳಿಗಳು ಇರಾನ್‌ ನ ಸೇನಾ ನೆಲೆಗಳು ಹಾಗೂ ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡಿದ್ದವು. ಆದರೆ, ದಕ್ಷಿಣ ಪಾರ್ಸ್‌ ನಂತಹ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಳ್ಳುವ ಮೂಲಕ ಅಪಾಯದ ಗೆರೆಯನ್ನು ದಾಟಲಾಗಿದ್ದು, ಆರ್ಥಿಕ ಯುದ್ಧ ಪ್ರಾರಂಭವಾಗಿರುವ ಮುನ್ಸೂಚನೆಯನ್ನು ನೀಡಿವೆ.

Bloomberg ಸುದ್ದಿ ಸಂಸ್ಥೆಯ ಪ್ರಕಾರ, "ಅಬ್ಕೈಬ್ ನಂತರ, ತೈಲ ಹಾಗೂ ಅನಿಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದಿರಬಹುದುದಾದ ಅತ್ಯಂತ ಪ್ರಮುಖ ವೈಮಾನಿಕ ದಾಳಿ ಇದಾಗಿದೆ" ಎಂದು 2019ರಲ್ಲಿ ಸೌದಿ ಅರೇಬಿಯಾದ ತೈಲ ಸ್ಥಾವರಗಳ ಮೇಲೆ ನಡೆದಿದ್ದ ದಾಳಿಯಿಂದ ಉಂಟಾಗಿದ್ದ ಜಾಗತಿಕ ಮಾರುಕಟ್ಟೆ ತಲ್ಲಣವನ್ನು ಉಲ್ಲೇಖಿಸಿ ರಿಸ್ತಾದ್ ಎನರ್ಜಿ ಸಂಸ್ಥೆಯಲ್ಲಿ ವಿಶ್ಲೇಷಕರಾಗಿರುವ ಜಾರ್ಜ್ ಲಿಯೋನ್ ಅಭಿಪ್ರಾಯ ಪಟ್ಟಿದ್ದಾರೆ " ಎಂದು ವರದಿ ಮಾಡಿದೆ.

ದಕ್ಷಿಣ ಪಾರ್ಸ್ ಅನಿಲ ನಿಕ್ಷೇಪವು ಖತರ್‌ ನೊಂದಿಗೆ ಹಂಚಿಕೆಯಾಗಿದ್ದು, ಪ್ರಮುಖ ಜಾಗತಿಕ ದ್ರವೀಕೃತ ನೈಸರ್ಗಿಕ ಅನಿಲ ಸರಬರಾಜು ನಿಕ್ಷೇಪವಾಗಿದೆ. ಈ ಪ್ರಾಂತ್ಯದಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧತೆಯಿಂದಾಗಿ, ಖಾರ್ಗ್ ದ್ವೀಪದಂತಹ (ಇರಾನ್‌ ನ ಪ್ರಮುಖ ರಫ್ತು ಟರ್ಮಿನಲ್) ಹಾಗೂ ಪ್ರತಿ ದಿನ ವಿಶ್ವದ ಶೇ. 21ರಷ್ಟು ದ್ರವೀಕೃತ ನೈಸರ್ಗಿಕ ಅನಿಲ ಹಾಗೂ 14 ದಶಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲ ಹಾದು ಹೋಗುವ ಹೊರ್ಮುಝ್ ಜಲಸಂಧಿಯಂತಹ ಇನ್ನಿತರ ಮಹತ್ವದ ಕೇಂದ್ರ ಬಿಂದುಗಳ ಮೇಲೆ ದಾಳಿ ನಡೆಯಬಹುದಾದ ಭೀತಿಯನ್ನು ಸೃಷ್ಟಿಯಾಗಿದೆ.

"ಒಂದು ವೇಳೆ ಇರಾನ್ ಏನಾದರೂ ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿಕೊಂಡರೆ, ಇರಾನ್‌ ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲು ಇಸ್ರೇಲ್ ನಿರ್ಧರಿಸಿದೆ ಎಂಬುದು ಈ ದಾಳಿಯ ಮುನ್ನೆಚ್ಚರಿಕೆಯಾಗಿದೆ" ಎಂದು Energy Aspects ಸಂಸ್ಥೆಯ ಭೌಗೋಳಿಕ ರಾಜಕೀಯ ಮುಖ್ಯಸ್ಥ ರಿಚರ್ಡ್ ಬ್ರಾನ್ಝ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಂದು ವೇಳೆ ಈ ಯುದ್ಧವೇನಾದರೂ ಮತ್ತಷ್ಟು ವಿಷಮಿಸಿದರೆ, ಖತರ್‌ನ ಇಂಧನ ಕಾರ್ಯಾಚರಣೆಗಳು ಹಾಗೂ ಇಸ್ರೇಲ್‌ ನ ಸ್ವಯಂ ಮೂಲಸೌಕರ್ಯಗಳು ಈ ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಎರಡೂ ದೇಶಗಳು ಇಂಧನ ರಫ್ತಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು, ಇಂತಹ ಯಾವುದೇ ದಾಳಿ ಏಷ್ಯ, ಯೂರೋಪ್ ಹಾಗೂ ಜಾಗತಿಕ ಪೂರೈಕೆ ಸರಪಣಿಯ ಮೇಲೆ ತಲ್ಲಣಕಾರಿ ಪರಿಣಾಮವನ್ನುಂಟು ಮಾಡಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.

ಇಸ್ರೇಲ್‌ ನ ಆರಂಭಿಕ ವೈಮಾನಿಕ ದಾಳಿಯ ನಂತರ, ತೈಲ ಬೆಲೆಗಳು ಶೇ. 14ರಷ್ಟು ಹೆಚ್ಚಳವಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಸುಮಾರು 73 ಡಾಲರ್‌ ಗೆ ಏರಿಕೆಯಾಗಿದೆ. ದಕ್ಷಿಣ ಪಾರ್ಸ್ ಅನಿಲ ನಿಕ್ಷೇಪವೇ ಬಹುತೇಕ ಸ್ವದೇಶಿ ಅಗತ್ಯವನ್ನು ಪೂರೈಸುತ್ತಿದ್ದರೂ, ಇಂಧನವೀಗ ನ್ಯಾಯಯುತ ಆಟವಾಗಿದೆ ಎಂಬುದು ಈ ಸಂದೇಶದಲ್ಲಿ ಅಡಗಿರುವ ಮಹತ್ವದ ಅಂಶವಾಗಿದೆ.

ಒಪೆಕ್ ಸಂಘಟನೆಯ ಮೂರನೆ ಅತಿ ದೊಡ್ಡ ಇಂಧನ ಉತ್ಪಾದನಾ ದೇಶವಾಗಿರುವ ಇರಾನ್ ಮೇಲೆ ದಾಳಿಯಾಗಿರುವ ಈ ಹೊತ್ತಿನಲ್ಲಿ, ಖಾರ್ಗ್ ದ್ವೀಪದ ಮೇಲೆ ಭವಿಷ್ಯದಲ್ಲಿ ನಡೆಯಬಹುದಾದ ದಾಳಿ ಅಥವಾ ಹೊರ್ಮುಝ್ ಜಲಸಂಧಿಯಲ್ಲಿ ಸೃಷ್ಟಿಯಾಗಬಹುದಾದ ಯಾವುದೇ ಬಗೆಯ ತಡೆ ತೈಲ ಹಾಗೂ ಅನಿಲ ಬೆಲೆಗಳು ಗಗನಕ್ಕೇರುವಂತೆ ಮಾಡಲಿವೆ ಎಂದು ಅಂದಾಜಿಸಲಾಗಿದೆ.

ಸೌಜನ್ಯ: NDTV.COM 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News