×
Ad

"ಇಸ್ರೇಲ್ ಪಶ್ಚಿಮ ಏಶ್ಯಾದ ಶಾಂತಿಗೆ ಕ್ಯಾನ್ಸರ್‌ನಂತಹ ದೇಶ": ಇರಾನ್ ಮೇಲಿನ ದಾಳಿಗೆ ಉತ್ತರ ಕೊರಿಯಾ ಖಂಡನೆ

Update: 2025-06-19 16:42 IST

PC : X 

ಸಿಯೋಲ್: ಇರಾನ್ ಮೇಲೆ ಇಸ್ರೇಲ್‌ನ ವಾಯುದಾಳಿಗಳನ್ನು ಖಂಡಿಸಿರುವ ಉತ್ತರ ಕೊರಿಯಾ, ಅವುಗಳನ್ನು ಹೇಯ ಆಕ್ರಮಣಕಾರಿ ಕೃತ್ಯಗಳು ಎಂದು ಬಣ್ಣಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳ ಬೆಂಬಲದೊಂದಿಗೆ ಯಹೂದಿ ದೇಶವು ಪಶ್ಚಿಮ ಏಶ್ಯಾದಲ್ಲಿ ಶಾಂತಿಗೆ ಗಮನಾರ್ಹ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕೆಸಿಎನ್‌ಎ ಹೇಳಿದೆ.

ಇಸ್ರೇಲ್ ಪಶ್ಚಿಮ ಏಶ್ಯಾದ ಶಾಂತಿಗೆ ಕ್ಯಾನ್ಸರ್‌ನಂತಹ ದೇಶವಾಗಿದೆ ಎಂದೂ ಉತ್ತರ ಕೊರಿಯಾ ಹೇಳಿದೆ.

ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಗುರುವಾರ ಏಳನೇ ದಿನವನ್ನು ಪ್ರವೇಶಿಸಿದೆ.

ಶುಕ್ರವಾರ ಇರಾನ್ ಮೇಲೆ ಇಸ್ರೇಲ್‌ನ ಮಿಲಿಟರಿ ದಾಳಿಯ ಬಗ್ಗೆ ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯದ ವಕ್ತಾರರು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು, ಪಶ್ಚಿಮ ಏಶ್ಯಾದಲ್ಲಿ ಹೊಸ ಸಂಪೂರ್ಣ ಯುದ್ಧದ ಅಪಾಯವನ್ನು ಹೆಚ್ಚಿಸಿದ್ದಕ್ಕಾಗಿ ಇಸ್ರೇಲ್‌ ಅನ್ನು ಖಂಡಿಸಿದ್ದಾರೆ ಎಂದು ಕೆಸಿಎನ್‌ಎ ತಿಳಿಸಿದೆ.

ಇರಾನ್ ಮೇಲೆ ಇಸ್ರೇಲ್‌ನ ದಾಳಿಯು ಆ ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದೆ ಮತ್ತು ಮಾನವತೆಯ ವಿರುದ್ಧ ಕ್ಷಮಿಸಲಾಗದ ಅಪರಾಧವಾಗಿದೆ ಎಂದು ಹೇಳಿರುವ ವಿದೇಶಾಂಗ ಸಚಿವಾಲಯದ ವಕ್ತಾರರು,ಜಗತ್ತು ಇಂದು ನೋಡುತ್ತಿರುವ ಗಂಭೀರ ಪರಿಸ್ಥಿತಿಯು ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳ ಬೆಂಬಲಿತ ಇಸ್ರೇಲ್ ಮಧ್ಯಪ್ರಾಚ್ಯದಲ್ಲಿ ಶಾಂತಿಗೆ ಕ್ಯಾನ್ಸರ್‌ನಂತಹ ದೇಶವಾಗಿದೆ ಮತ್ತು ಜಾಗತಿಕ ಶಾಂತಿ ಹಾಗೂ ಭದ್ರತೆಯನ್ನು ನಾಶ ಮಾಡುತ್ತಿರುವ ಮುಖ್ಯ ಅಪರಾಧಿಯಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದಿದ್ದಾರೆ.

ಉತ್ತರ ಕೊರಿಯಾ ಮತ್ತು ಇರಾನ್ ನಡುವೆ 1973ರಲ್ಲಿ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಗೊಂಡಿದ್ದು, ಉಭಯ ದೇಶಗಳು ನಿಕಟ ಸಂಬಂಧವನ್ನು ಹೊಂದಿವೆ. ಇದೇ ವೇಳೆ ತಮ್ಮ ಅಣ್ವಸ್ತ್ರ ಕಾರ್ಯಕ್ರಮಗಳಿಗಾಗಿ ಅವೆರಡೂ ದೇಶಗಳು ಅಂತರರಾಷ್ಟ್ರೀಯ ನಿರ್ಬಂಧಕ್ಕೊಳಪಟ್ಟಿವೆ. ಉತ್ತರ ಕೊರಿಯಾ ಮತ್ತು ಇರಾನ್ ಉಕ್ರೇನ್ ವಿರುದ್ಧ ಯುದ್ಧಕ್ಕೆ ಬೆಂಬಲವಾಗಿ ಶಸ್ತ್ರಾಸ್ತ್ರಗಳನ್ನೂ ಒದಗಿಸಿವೆ ಎಂದು ‘ಯೋನ್‌ಹ್ಯಾಪ್’ ವರದಿ ಮಾಡಿದೆ.

ಈ ನಡುವೆ ಇಸ್ರೇಲ್ ತನ್ನ ವಾಯುಪಡೆಯು ಇರಾನಿನ ಕ್ಷಿಪಣಿ ಉತ್ಪಾದನಾ ಸ್ಥಾವರಗಳನ್ನು ಗುರಿಯಾಗಿಸಿಕೊಂಡಿದ್ದು, ಟೆಹರಾನ್ ಮತ್ತು ಇರಾನಿನ ಇತರ ಪ್ರದೇಶಗಳಲ್ಲಿ ಸರಣಿ ದಾಳಿಗಳನ್ನು ನಡೆಸುತ್ತಿದೆ ಎಂದು ಗುರುವಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News