ಅಟಾರ್ನಿ ಜನರಲ್ ವಜಾ ನಿರ್ಣಯಕ್ಕೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ
ಗ್ಯಾಲಿ ಬಹರವ್ | PC : aljazeera.com
ಜೆರುಸಲೇಂ, ಆ.5: ಇಸ್ರೇಲ್ ನಲ್ಲಿ ನ್ಯಾಯಾಂಗ- ಸರಕಾರದ ನಡುವಿನ ಬಿಕ್ಕಟ್ಟು ತಾರಕಕ್ಕೆ ಏರಿದ್ದು ಅಟಾರ್ನಿ ಜನರಲ್ ಅವರನ್ನು ವಜಾಗೊಳಿಸಲು ಇಸ್ರೇಲ್ ಸರಕಾರ ಸರ್ವಾನುಮತದ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ.
ಆಂತರಿಕ ಭದ್ರತಾ ಏಜೆನ್ಸಿಯ ಮುಖ್ಯಸ್ಥರನ್ನು ವಜಾಗೊಳಿಸುವುದು ಸೇರಿದಂತೆ ಚುನಾಯಿತ ಸರಕಾರದ ನಿರ್ಧಾರಗಳನ್ನು ತಡೆಹಿಡಿಯುವ ಮೂಲಕ ಅಟಾರ್ನಿ ಜನರಲ್ ಗ್ಯಾಲಿ ಬಹರವ್-ಮಿಯಾರಾ ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಪ್ರಧಾನಿ ನೆತನ್ಯಾಹು ಹಾಗೂ ಅವರ ಬೆಂಬಲಿಗರು ಆರೋಪಿಸಿದ್ದಾರೆ. ನೆತನ್ಯಾಹು ಹಾಗೂ ಅವರ ಹಲವು ಆಪ್ತರು ಸರಣಿ ಕ್ರಿಮಿನಲ್ ವಿಚಾರಣೆಗಳನ್ನು ಎದುರಿಸುತ್ತಿರುವುದರಿಂದ ಹಿತಾಸಕ್ತಿಯ ಸಂಘರ್ಷವಿದೆ ಎಂದು ಮಿಯಾರಾ ಪ್ರತಿಕ್ರಿಯಿಸಿದ್ದಾರೆ.
ಅಟಾರ್ನಿ ಜನರಲ್ ಅವರನ್ನು ವಜಾಗೊಳಿಸಿರುವುದು ಕಾನೂನುಬಾಹಿರ ಕ್ರಮವಾಗಿದ್ದು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಮಾನವ ಹಕ್ಕುಗಳ ಮೇಲ್ವಿಚಾರಣಾ ಗುಂಪು ಹೇಳಿದ್ದು ಈ ಅರ್ಜಿಗೆ 15,000ಕ್ಕೂ ಅಧಿಕ ನಾಗರಿಕರು ಸಹಿ ಹಾಕಿರುವುದಾಗಿ ಹೇಳಿದೆ.