ಗಾಝಾ ತೀರ ತಲುಪಲು ಯತ್ನಿಸಿದ 9 ‘ನೆರವು’ ನೌಕೆಗಳನ್ನು ತಡೆಹಿಡಿದ ಇಸ್ರೇಲ್
Photo Credit : NDTV
ಜೆರುಸಲೇಂ,ಅ.8: ಗಾಝಾಕ್ಕೆ ಇಸ್ರೇಲ್ ವಿಧಿಸಿರುವ ನೌಕಾ ನಿರ್ಬಂಧವನ್ನು ಭೇದಿಸಲು ಯತ್ನಿಸಿದ 9 ‘ನೆರವು’ ನೌಕೆಗಳ ಸಮೂಹವನ್ನು ಮೆಡಿಟರೇನಿಯನ್ ಸಮುದ್ರದಲ್ಲಿ ಇಸ್ರೇಲಿ ಸೇನೆ ಅಡ್ಡಗಟ್ಟಿದೆ ಹಾಗೂ ನೌಕೆಗಳಲ್ಲಿದ್ದ ಹಲವಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಚಳವಳಿಯ ಸಂಘಟಕರು ಹಾಗೂ ಇಸ್ರೇಲ್ ವಿದೇಶಾಂಗ ಸಚಿವಾಲಯ ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿವೆ.
ಗಾಝಾ ಸಂತ್ರಸ್ತರಿಗೆ ನೆರವು ಸಾಮಾಗ್ರಿಗಳೊಂದಿಗೆ ಆಗಮಿಸಿದ ನೌಕೆಗಳಲ್ಲಿದ್ದ ಎಲ್ಲಾ 145 ಕಾರ್ಯಕರ್ತರ ಆರೋಗ್ಯ ಪರಿಸ್ಥಿತಿ ಉತ್ತಮವಾಗಿದ್ದು, ಅವರನ್ನು ಮುಂದಿನ ಪ್ರಕ್ರಿಯೆಗಾಗಿ ಇಸ್ರೇಲ್ ನ ತೀರಕ್ಕೆ ಕರೆತರಲಾಗಿದೆ ಹಾಗೂ ಶೀಘ್ರದಲ್ಲೇ ಗಡಿಪಾರು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ನೌಕಾಯಾನವನ್ನು ಆಯೋಜಿಸಿದ್ದ ‘ಫ್ರೀಡಂ ಫ್ಲೋಟಿಲ್ಲಾ ಕೋಲಿಶನ್’ ಹಾಗೂ ‘ದ ಥೌಸಂಡ್ ಮ್ಯಾಡ್ಲಿನ್ಸ್ ಟು ಗಾಝಾ’ ಸಂಘಟನೆಗಳು, ಕಾರ್ಯಕರ್ತರ ಬಂಧನವನ್ನು ಖಂಡಿಸಿದ್ದು, ಇಸ್ರೇಲಿ ಸೇನೆಯ ಈ ನಡೆಯು ಏಕಪಕ್ಷೀಯ ಹಾಗೂ ಕಾನೂನುಬಾಹಿರವೆಂದು ಖಂಡಿಸಿವೆ.
ಕಳೆದ ವಾರ ಮಾನವೀಯ ನೆರವಿನ ಸಾಮಾಗ್ರಿಗಳೊಂದಿಗೆ 40ಕ್ಕೂ ಅಧಿಕ ನೌಕೆಗಳೊಂದಿಗೆ ಗಾಝಾವನ್ನು ತಲುಪಲು ಯತ್ನಿಸಿದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಹಾಗೂ ಯುರೋಪ್‌ನ ಸಂಸದರು ಒಳಗೊಂಡಂತೆ ಸುಮಾರು 450 ಕಾರ್ಯಕರ್ತರನ್ನು ಇಸ್ರೇಲ್ ಸೇನೆ ವಶಕ್ಕೆ ತೆಗೆದುಕೊಂಡಿತ್ತು.