×
Ad

ಇರಾನ್ ಅಧ್ಯಕ್ಷರ ಹತ್ಯೆಗೆ ಇಸ್ರೇಲ್ ಪ್ರಯತ್ನಿಸಿತ್ತು: ವರದಿ

Update: 2025-07-13 20:36 IST

ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ | PC : NDTV  

ಟೆಹ್ರಾನ್: ಜೂನ್ 16ರಂದು ಇಸ್ರೇಲ್‍ ನ ವೈಮಾನಿಕ ದಾಳಿಯಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಲಘುವಾಗಿ ಗಾಯಗೊಂಡಿದ್ದರು ಎಂದು ಇರಾನಿನ ರೆವಲ್ಯುಷನರಿ ಗಾರ್ಡ್ ಕಾರ್ಪ್ಸ್ (IRGC) ಸಂಯೋಜಿತ `ಫಾರ್ಸ್ ನ್ಯೂಸ್ ಏಜೆನ್ಸಿ' ರವಿವಾರ ವರದಿ ಮಾಡಿದೆ.

ಪಶ್ಚಿಮ ಟೆಹ್ರಾನ್‍ ನ ಶಹ್ರಾಕ್-ಇ- ಫರ್ಬ್ ಬಳಿಯ ಪ್ರದೇಶದಲ್ಲಿ ಇರಾನಿನ ಉನ್ನತ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಯುತ್ತಿದ್ದ ಕಟ್ಟಡಕ್ಕೆ ಇಸ್ರೇಲ್‍ ನ ಕ್ಷಿಪಣಿ ಅಪ್ಪಳಿಸಿದ್ದು ಸಭೆಯಲ್ಲಿ ಉಪಸ್ಥಿತರಿದ್ದ ಪೆಝೆಷ್ಕಿಯಾನ್ ಅವರ ಕಾಲಿಗೆ ಗಾಯವಾಗಿದೆ. ಅಧ್ಯಕ್ಷರ ಹೊರತಾಗಿ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಘರ್ ಘಲಿಬಾಫ್, ನ್ಯಾಯಾಂಗ ಮುಖ್ಯಸ್ಥ ಮೊಹ್ಸೆನಿ ಎಜೆಯ್ ಹಾಗೂ ಇತರ ಉನ್ನತ ಅಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿ ಹೇಳಿದೆ.

ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾರನ್ನು ಹತ್ಯೆ ಮಾಡಿದ ರೀತಿಯಲ್ಲೇ ಇಸ್ರೇಲ್ ಕಾರ್ಯಾಚರಣೆ ರೂಪಿಸಿತ್ತು. ಕಟ್ಟಡವನ್ನು ಪ್ರವೇಶಿಸುವ ಮತ್ತು ನಿರ್ಗಮಿಸುವ ದ್ವಾರವನ್ನು ಗುರಿಯಾಗಿಸಿ 6 ಕ್ಷಿಪಣಿ ಪ್ರಯೋಗಿಸಲಾಗಿದೆ. ತಪ್ಪಿಸಿಕೊಳ್ಳುವ ಮಾರ್ಗವನ್ನು ನಿರ್ಬಂಧಿಸಲು ಮತ್ತು ಗಾಳಿಯ ಹರಿವನ್ನು ಅಡ್ಡಿಪಡಿಸುವುದು ಇದರ ಉದ್ದೇಶವಾಗಿತ್ತು. ಕಟ್ಟಡದ ಕೆಳ ಅಂತಸ್ತಿನಲ್ಲಿ ಇರಾನಿನ ಅಧಿಕಾರಿಗಳು ಹಾಜರಿದ್ದರು. ಸ್ಫೋಟದ ಬಳಿಕ ಸಭೆ ನಡೆಯುತ್ತಿದ್ದ ಮೇಲಿನ ಅಂತಸ್ತಿಗೆ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಆದರೆ ತುರ್ತು ನಿರ್ಗಮನ ದ್ವಾರವನ್ನು ಮುಂಚಿತವಾಗಿಯೇ ಸಿದ್ಧಪಡಿಸಲಾಗಿತ್ತು ಮತ್ತು ಇದರ ಮೂಲಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ.

ಸಣ್ಣ ದ್ವಾರದ ಮೂಲಕ ನಿರ್ಗಮಿಸುವಾಗ ಪೆಝೆಷ್ಕಿಯಾನ್ ಹಾಗೂ ಇತರ ಅಧಿಕಾರಿಗಳು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಬಳಸಿದ ಮಾಹಿತಿಯ ನಿಖರತೆಯನ್ನು ಗಮನಿಸಿದರೆ ಯಾರೋ ಒಬ್ಬರಿಂದ ಸಭೆಯ ಕುರಿತ ಮಾಹಿತಿ ಇಸ್ರೇಲ್‍ ಗೆ ಸೋರಿಕೆಯಾಗಿರುವ ಸಾಧ್ಯತೆಯಿದ್ದು ಈ ಬಗ್ಗೆ ಇರಾನ್‍ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ತನ್ನ ಹತ್ಯೆಗೆ ಇಸ್ರೇಲ್ ಪ್ರಯತ್ನ ನಡೆಸಿತ್ತು ಎಂದು ಇರಾನ್ ಅಧ್ಯಕ್ಷರು ಈ ಹಿಂದೆಯೇ ಆರೋಪಿಸಿದ್ದರು. 12 ದಿನ ನಡೆದಿದ್ದ ಯುದ್ಧದಲ್ಲಿ ಇಸ್ರೇಲಿ ಪಡೆಗಳು ಇರಾನಿನ ಹಲವು ಉನ್ನತ ಮಿಲಿಟರಿ ಕಮಾಂಡರ್‍ ಗಳು ಹಾಗೂ ಪರಮಾಣು ವಿಜ್ಞಾನಿಗಳನ್ನು ಹತ್ಯೆ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News