×
Ad

ಉತ್ತರ ಗಾಝಾದಲ್ಲಿ ನೆರವು ವಿತರಣೆ ನಡೆಸದಂತೆ ಇಸ್ರೇಲ್ ನಿರ್ಬಂಧ: ವಿಶ್ವಸಂಸ್ಥೆ ಏಜೆನ್ಸಿ

Update: 2024-03-25 22:53 IST

Photo : X/@UN

ಗಾಝಾ: ಉತ್ತರ ಗಾಝಾದಲ್ಲಿ ನೆರವು ವಿತರಣೆ ನಡೆಸದಂತೆ ತನ್ನನ್ನು ಇಸ್ರೇಲ್ ನಿರ್ಬಂಧಿಸಿದೆ ಎಂದು ಫೆಲೆಸ್ತೀನಿಯನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ `ಯುಎನ್‍ಆರ್ ಡಬ್ಲ್ಯೂಎ' ಹೇಳಿದೆ.

`ಉತ್ತರ ಗಾಝಾದಲ್ಲಿ ಮಾನವೀಯ ನೆರವಿನ ತುರ್ತು ಅಗತ್ಯವಿದೆ. ಆದರೆ ನಮ್ಮ ಕಣ್ಣೆದುರೇ ದುರಂತದ ಅಪಾಯ ತೆರೆದುಕೊಳ್ಳುತ್ತಿದ್ದರೂ, ಇನ್ನು ಮುಂದೆ ಉತ್ತರ ಗಾಝಾಕ್ಕೆ ಯಾವುದೇ ಯುಎನ್‍ಆರ್ ಡಬ್ಲ್ಯೂಎ ಬೆಂಗಾವಲಿನ ಆಹಾರ ವಿತರಣೆಗೆ ಅನುಮೋದಿಸುವುದಿಲ್ಲ ಎಂದು ಇಸ್ರೇಲ್ ಅಧಿಕಾರಿಗಳು ವಿಶ್ವಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇದು ಆಘಾತಕಾರಿಯಾಗಿದೆ ಮತ್ತು ಮಾನವ ನಿರ್ಮಿತ ಕ್ಷಾಮದ ಸಂದರ್ಭ ಜೀವರಕ್ಷಕ ನೆರವು ಪೂರೈಸುವುದಕ್ಕೆ ಉದ್ದೇಶಪೂರ್ವಕ ತಡೆಯಾಗಿದೆ' ಎಂದು ಯುಎನ್‍ಆರ್ ಡಬ್ಲ್ಯೂಎ ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ `ಉತ್ತರ ಗಾಝಾಕ್ಕೆ ನೆರವು ವಿತರಣೆಯಿಂದ ಯುಎನ್‍ಆರ್ ಡಬ್ಲ್ಯೂಎ ಈ ಹಿಂದೆಯೇ ಹಿಂದೆ ಸರಿದಿದೆ. ಆದರೆ ನಾವು ವಿಶ್ವಸಂಸ್ಥೆಯ ಇತರ ಏಜೆನ್ಸಿಗಳು ಹಾಗೂ ನೆರವು ವಿತರಣೆ ಏಜೆನ್ಸಿಗಳ ಜತೆಗೂಡಿ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದೇವೆ. ಈಗ ಈ ಕಾರ್ಯದಲ್ಲಿ ಮತ್ತೆ ಯುಎನ್‍ಆರ್ ಡಬ್ಲ್ಯೂಎ ಮೂಗು ತೂರಿಸುವ ಅಗತ್ಯವಿಲ್ಲ. ಉತ್ತರ ಗಾಝಾಕ್ಕೆ ಹೊಸ ಗಡಿದಾಟುಗಳನ್ನು ತೆರೆಯುವ ಮೂಲಕ ಕ್ಷಿಪ್ರವಾಗಿ ನೆರವು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ' ಎಂದಿದೆ.

ಜನವರಿ 29ರಿಂದ ಉತ್ತರ ಗಾಝಾಪಟ್ಟಿಗೆ ನೆರವು ವಿತರಿಸಲು ಯುಎನ್‍ಆರ್ ಡಬ್ಲ್ಯೂಎಗೆ ಸಾಧ್ಯವಾಗುತ್ತಿಲ್ಲ. ತಮ್ಮ ಕೋರಿಕೆಯನ್ನು ಇಸ್ರೇಲ್ ಲಿಖಿತ ರೂಪದಲ್ಲಿ ತಿರಸ್ಕರಿಸಿದೆ ಎಂದು ಯುಎನ್‍ಆರ್ ಡಬ್ಲ್ಯೂಎ ನಿರ್ದೇಶಕಿ ಜ್ಯೂಲಿಯಟ್ ಟೊವುಮಾರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಗಾಝಾದಲ್ಲಿ ಮಾನವೀಯ ನೆರವಿನ ಪ್ರಕ್ರಿಯೆಯ ಹೃದಯ ಬಡಿತವಾಗಿದೆ. ಉತ್ತರಕ್ಕೆ ಆಹಾರ ನೆರವು ವಿತರಿಸುವುದನ್ನು ನಿರ್ಬಂಧಿಸುವುದು ಸಾವಿರಾರು ಜನರನ್ನು ಕ್ಷಾಮದ ದವಡೆಗೆ ನೂಕಲಿದೆ. ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ವಿಶ್ವಸಂಸ್ಥೆ ಮಾನವೀಯ ನೆರವು ಉಪಕ್ರಮಗಳ ಸಮನ್ವಯ ಏಜೆನ್ಸಿಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News