ಗಾಝಾ | ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ : ಮಕ್ಕಳು ಸೇರಿದಂತೆ ಕನಿಷ್ಠ 25 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | PC :aljazeera.com
ಗಾಝಾ : ನಿರಾಶ್ರಿತರ ಶಿಬಿರವಾಗಿ ಪರಿವರ್ತಿಸಲಾದ ಗಾಝಾದ ಶಾಲೆ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 25 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಶಾಲೆಯಲ್ಲಿ ಜನರು ಮಲಗಿದ್ದ ವೇಳೆ ಇಸ್ರೇಲ್ ಬಾಂಬ್ ದಾಳಿಯನ್ನು ನಡೆಸಿದೆ ಎಂದು ವರದಿಯಾಗಿದೆ. ಉತ್ತರ ಗಾಝಾದಲ್ಲಿರುವ ಶಾಲೆ ಮೇಲೆ ನಡೆದ ದಾಳಿಯಲ್ಲಿ 55ಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರು ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ತುರ್ತು ಸೇವೆಯ ಮುಖ್ಯಸ್ಥ ಫಾಹ್ಮಿ ಅವಾದ್ ಹೇಳಿದ್ದಾರೆ.
ರವಿವಾರ ಉತ್ತರ ಗಾಝಾದ ಜಬಾಲಿಯಾದಲ್ಲಿ ಮನೆಯೊಂದನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸ್ಥಳೀಯ ಪತ್ರಕರ್ತ ಹಸನ್ ಮಜ್ದಿ ಅಬು ವಾರ್ಡಾ ಮತ್ತು ಅವರ ಕುಟುಂಬದ ಹಲವು ಸದಸ್ಯರು ಮೃತಪಟ್ಟಿದ್ದರು. ಮಧ್ಯ ಗಾಝಾದ ನುಸೀರಾತ್ ಪ್ರದೇಶದಲ್ಲಿ ಮನೆಯೊಂದನ್ನು ಗುರಿಯಾಗಿಸಿ ನಡೆದ ಮತ್ತೊಂದು ದಾಳಿಯಲ್ಲಿ ಗಾಝಾದ ನಾಗರಿಕ ತುರ್ತು ಸೇವಾ ಇಲಾಖೆಯ ಹಿರಿಯ ಅಧಿಕಾರಿ ಅಶ್ರಫ್ ಅಬು ನಾರ್ ಮತ್ತು ಅವರ ಪತ್ನಿ ಮೃತಪಟ್ಟಿದ್ದರು.
ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಯುದ್ಧ ಘೋಷಿಸಿ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ ಗಾಝಾದಲ್ಲಿ ಈವರೆಗೆ ಕನಿಷ್ಠ 53,939 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 1, 22,797 ಜನರು ಗಾಯಗೊಂಡಿದ್ದಾರೆ.