×
Ad

ಗಾಝಾದ ಪ್ರಮುಖ ಬಂದರು ವಶಕ್ಕೆ ಪಡೆದ ಇಸ್ರೇಲ್

Update: 2023-11-16 22:42 IST

ಸಾಂದರ್ಭಿಕ ಚಿತ್ರ| Photo: NDTV 

ಗಾಝಾ: ಗಾಝಾದ ಪ್ರಮುಖ ಆಸ್ಪತ್ರೆ ಅಲ್-ಶಿಫಾದ ಮೇಲಿನ ದಾಳಿಯ ಬಳಿಕ ಮುನ್ನಡೆ ಸಾಧಿಸಿರುವ ಇಸ್ರೇಲ್‍ನ ಪದಾತಿ ದಳ ಗಾಝಾದ ಪ್ರಮುಖ ಬಂದರನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.

ಇಸ್ರೇಲ್ ಪಡೆಯ ಮುತ್ತಿಗೆಗೆ ಒಳಗಾದ ಗಾಝಾದಲ್ಲಿ ಬಾಂಬ್ ಹಾಗೂ ಗುಂಡಿನ ದಾಳಿ ತೀವ್ರಗೊಂಡಿದ್ದು ಗಾಝಾ ನಗರದ  ಬಳಿ ಕರಾವಳಿಯಲ್ಲಿ ಕನಿಷ್ಟ ಒಂದು ಡಜನ್ ಟ್ಯಾಂಕ್‍ಗಳು ಮತ್ತು ಸೈನಿಕರ ಗುಂಪುಗಳಿವೆ ಎಂದು ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಗಾಝಾದ ಭೂಪ್ರದೇಶದ ಉತ್ತರದಲ್ಲಿರುವ ಗಾಝಾ ನಗರದ ಬಂದರಿನ ಕಾರ್ಯನಿರ್ವಹಣೆಯನ್ನು ತನ್ನ ಪಡೆ ನಿಯಂತ್ರಣಕ್ಕೆ ಪಡೆದಿದ್ದು ಬಂದರು ಪ್ರದೇಶದ ಎಲ್ಲಾ ಕಟ್ಟಡಗಳನ್ನೂ ತೆರವುಗೊಳಿಸಲಾಗಿದೆ. ಕಾರ್ಯಾಚರಣೆಯ ಸಂದರ್ಭ ಕನಿಷ್ಟ 10 ಹಮಾಸ್ ಕಾರ್ಯಕರ್ತರು ಹತರಾಗಿದ್ದು 10 ಸುರಂಗ ಮಾರ್ಗಗಳನ್ನು ನಾಶಗೊಳಿಸಲಾಗಿದೆ ಎಂದು ಇಸ್ರೇಲ್ ಗುರುವಾರ ಘೋಷಿಸಿದೆ.

ಗಾಝಾ ಸಂಘರ್ಷಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು:

►  ಸಂಘರ್ಷ ಆರಂಭಗೊಂಡಂದಿನಿಂದ ಗಾಝಾದಲ್ಲಿ ತನ್ನ 51 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದೆ.

►  ಇಸ್ರೇಲ್ ದಾಳಿಯಿಂದ ಗಾಝಾದಲ್ಲಿ ಮೃತಪಟ್ಟ ಫೆಲೆಸ್ತೀನೀಯರ ಸಂಖ್ಯೆ 11,500 ದಾಟಿದ್ದು ಇದರಲ್ಲಿ ಸಾವಿರಾರು ಮಕ್ಕಳು ಸೇರಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

►  ಹಮಾಸ್ ಜತೆಗಿನ ಯುದ್ಧದಲ್ಲಿ ಸಂಯಮ ವಹಿಸುವಂತೆ ಇಸ್ರೇಲ್ ಅನ್ನು ಯುರೋಪಿಯನ್ ಯೂನಿಯನ್‍ನ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಆಗ್ರಹಿಸಿದ್ದಾರೆ.

►  ಅಲ್-ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.

►  ಈ ಆರೋಪವನ್ನು ಆಸ್ಪತ್ರೆಯ ನಿರ್ದೇಶಕರು ಮತ್ತು ಹಮಾಸ್ ನಿರಾಕರಿಸಿದೆ.

►  ಬುಧವಾರ ಅಲ್-ಶಿಫಾದ ಮೇಲಿನ ದಾಳಿಗೂ ಮುನ್ನ ಆಸ್ಪತ್ರೆಯಲ್ಲಿ 2,300 ರೋಗಿಗಳು, ಸಿಬಂದಿ ಹಾಗೂ ಸ್ಥಳಾಂತರಗೊಂಡ ನಾಗರಿಕರಿದ್ದರು ಎಂದು ವಿಶ್ವಸಂಸ್ಥೆಯ ಏಜೆನ್ಸಿ ಮಾಹಿತಿ ನೀಡಿದೆ.

►  ಗಾಝಾ ಪಟ್ಟಿಯಲ್ಲಿ ಹಮಾಸ್ ಮುಖಂಡ ಇಸ್ಮಾಯಿಲ್ ಹನಿಯೆಹ್ ಅವರ ಮನೆಗೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News