ಸಿರಿಯಾ ಬಫರ್ ವಲಯ ವಶಕ್ಕೆ ಪಡೆದ ಇಸ್ರೇಲ್ | ದೀರ್ಘಾವಧಿ ಉಪಸ್ಥಿತಿಗೆ ಸಿದ್ಧರಾಗಲು ಪಡೆಗಳಿಗೆ ಆದೇಶ
ಸಾಂದರ್ಭಿಕ ಚಿತ್ರ | PC : PTI
ಜೆರುಸಲೇಂ : ಆಯಕಟ್ಟಿನ ಗೋಲನ್ ಹೈಟ್ಸ್ ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ ಗಸ್ತು ತಿರುಗುವ ಇಸ್ರೇಲ್ ಮತ್ತು ಸಿರಿಯಾದ ನಡುವಿನ ಬಫರ್ ವಲಯದಲ್ಲಿ ಚಳಿಗಾಲದ ಉದ್ದಕ್ಕೂ ಉಳಿಯಲು ಸಿದ್ಧರಾಗುವಂತೆ ತನ್ನ ಪಡೆಗಳಿಗೆ ಇಸ್ರೇಲ್ ನ ರಕ್ಷಣಾ ಸಚಿವರು ಸೂಚಿಸಿರುವುದಾಗಿ ವರದಿಯಾಗಿದೆ.
ರವಿವಾರ ಸಿರಿಯಾದ ಬಂಡುಕೋರರು ಅಧ್ಯಕ್ಷ ಅಸ್ಸಾದ್‍ರನ್ನು ಅಧಿಕಾರದಿಂದ ಪದಚ್ಯುತಗೊಳಿಸುತ್ತಿದ್ದಂತೆಯೇ ಇಸ್ರೇಲ್ ಸೇನೆ ಬಫರ್ ವಲಯದ ಒಳಗೆ ನುಗ್ಗಿ ವಶಕ್ಕೆ ಪಡೆದಿತ್ತು. ಅಂದಿನಿಂದ ಬಫರ್ ವಲಯದ ಮೂಲಕ ಸಿರಿಯಾದ ಮಿಲಿಟರಿ ನೆಲೆಗಳು, ರಾಸಾಯನಿಕ ಅಸ್ತ್ರಗಳ ದಾಸ್ತಾನು ಕೇಂದ್ರ, ವಾಯುನೆಲೆಗಳ ಮೇಲೆ ನಿರಂತರ ವೈಮಾನಿಕ ಮತ್ತು ನೌಕಾ ದಾಳಿಯನ್ನು ನಡೆಸುತ್ತಿದ್ದು ಈ ಮಾರಕ ಅಸ್ತ್ರಗಳು ಬಂಡುಕೋರ ಪಡೆಯ ಕೈಸೇರುವುದನ್ನು ತಡೆಯಲು ದಾಳಿ ನಡೆಸುತ್ತಿರುವುದಾಗಿ ಸಮರ್ಥಿಸಿಕೊಂಡಿದೆ.
`ಸಿರಿಯಾದಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಮೌಂಟ್ ಹೆರ್ಮನ್ ಶಿಖರ ಪ್ರದೇಶದಲ್ಲಿ ನಮ್ಮ ಉಪಸ್ಥಿತಿಯನ್ನು ಕಾಪಾಡಿಕೊಳ್ಳುವುದು ನಿರ್ಣಾಯಕ ಭದ್ರತಾ ಪ್ರಾಮುಖ್ಯವಾಗಿದೆ. ಸವಾಲೊಡ್ಡುವ ಹವಾಮಾನ ಪರಿಸ್ಥಿತಿಯ ಹೊರತಾಗಿಯೂ ಯೋಧರು ಅಲ್ಲಿಯೇ ಇರಲು ಅನುವು ಮಾಡಿಕೊಡುವುದು ಅತ್ಯಗತ್ಯವಾಗಿದೆ. ಬಫರ್ ವಲಯವನ್ನು ವಶಕ್ಕೆ ಪಡೆದಿರುವುದು ಸ್ವಯಂ ರಕ್ಷಣೆಯ ಕ್ರಮವಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ವಕ್ತಾರರು ಶುಕ್ರವಾರ ಹೇಳಿದ್ದಾರೆ.
ಅಸ್ಸಾದ್ ಆಡಳಿತದ ಪತನವು ಇಸ್ರೇಲ್ ನ ಗಡಿಯಲ್ಲಿ ಮತ್ತು ಬಫರ್ ವಲಯದಲ್ಲಿ ನಿರ್ವಾತವನ್ನು ಸೃಷ್ಟಿಸಿದೆ. ಅಲ್ಲಿ ನಮ್ಮ ಪಡೆಯನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದ್ದು 1974ರ ಒಪ್ಪಂದ ಮರುಸ್ಥಾಪನೆ ಆಗುವ ತನಕ ಮತ್ತು ನಮ್ಮ ಗಡಿಭಾಗದಲ್ಲಿ ಭದ್ರತೆಯನ್ನು ಖಚಿತ ಪಡಿಸಿಕೊಳ್ಳುವವರೆಗೆ ಸೇನೆಯ ಉಪಸ್ಥಿತಿ ಮುಂದುವರಿಯುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 1967ರ ಅರಬ್-ಇಸ್ರೇಲ್ ಯುದ್ಧದ ಸಂದರ್ಭ ಗೋಲಾನ್ ಹೈಟ್ಸ್ ನ ಬಹುತೇಕ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಂಡಿತ್ತು. 1981ರಲ್ಲಿ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ನಡೆಯನ್ನು ಅಮೆರಿಕ ಮಾತ್ರ ಮಾನ್ಯ ಮಾಡಿದೆ.
►ಇಸ್ರೇಲ್ ನಡೆಗೆ ವಿಶ್ವಸಂಸ್ಥೆ ಕಳವಳ
ಬಫರ್ ವಲಯವನ್ನು ಇಸ್ರೇಲ್ ವಶಪಡಿಸಿಕೊಂಡಿರುವುದಕ್ಕೆ ವಿಶ್ವಸಂಸ್ಥೆ ಮುಖ್ಯಸ್ಥರು ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. `ಸಿರಿಯಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಇತ್ತೀಚಿನ ಮತ್ತು ವ್ಯಾಪಕ ಉಲ್ಲಂಘನೆಯಿಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ತೀವ್ರ ಕಳವಳಗೊಂಡಿದ್ದಾರೆ. ಸಿರಿಯಾದ ಹಲವು ನೆಲೆಗಳ ಮೇಲೆ ಇಸ್ರೇಲ್‍ನಿಂದ ನಿರಂತರ ವೈಮಾನಿಕ ದಾಳಿ ನಡೆಯುತ್ತಿರುವ ಬಗ್ಗೆ ವಿಶ್ವಸಂಸ್ಥೆ ವಿಶೇಷ ಕಳವಳ ವ್ಯಕ್ತಪಡಿಸಿದೆ' ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ಡ್ಯುಜೆರಿಕ್ ಹೇಳಿಕೆ ನೀಡಿದ್ದಾರೆ.
ಬಫರ್ ವಲಯವನ್ನು ಇಸ್ರೇಲ್ ವಶಪಡಿಸಿಕೊಂಡಿರುವುದು 1974ರ ಕದನ ವಿರಾಮವನ್ನು ಉಲ್ಲಂಘಿಸುತ್ತದೆ. ಕದನ ವಿರಾಮಕ್ಕೆ ಸಹಿ ಹಾಕಿರುವ ಎಲ್ಲಾ ಪಕ್ಷಗಳೂ ತಮ್ಮ ಬದ್ಧತೆಯನ್ನು ಖಾತರಿಪಡಿಸಬೇಕು ಮತ್ತು ಬಫರ್ ವಲಯದಲ್ಲಿ ಅನಧಿಕೃತ ಉಪಸ್ಥಿತಿಯನ್ನು ತಕ್ಷಣ ಅಂತ್ಯಗೊಳಿಸಬೇಕು' ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.
ಟರ್ಕಿ ಗುಪ್ತಚರ ಮುಖ್ಯಸ್ಥ ದಮಾಸ್ಕಸ್ ಗೆ ಭೇಟಿ
ಟರ್ಕಿಯ ಗುಪ್ತಚರ ಏಜೆನ್ಸಿ ಮುಖ್ಯಸ್ಥ ಇಬ್ರಾಹಿಂ ಕಾಲಿನ್ ಶುಕ್ರವಾರ ಸಿರಿಯಾ ರಾಜಧಾನಿ ದಮಾಸ್ಕಸ್ ಗೆ ಆಗಮಿಸಿರುವುದಾಗಿ ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ.
ಟರ್ಕಿಯು ನೆರೆಯ ಸಿರಿಯಾದಲ್ಲಿ ದಂಗೆಕೋರ ಗುಂಪುಗಳನ್ನು ಬೆಂಬಲಿಸಿದೆ ಮತ್ತು ಕಳೆದ ರವಿವಾರ ಪತನಗೊಂಡ ಬಶರ್ ಅಲ್ ಅಸ್ಸಾದ್ ಸರಕಾರವನ್ನು ವಿರೋಧಿಸಿತ್ತು. ಇದೀಗ ಸಿರಿಯಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು ಟರ್ಕಿಯ ಉದ್ದೇಶವಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸಿದ್ದು ಟರ್ಕಿ ನಿಯೋಗ ಮತ್ತು ಸಿರಿಯಾದ ಮಧ್ಯಂತರ ಸರಕಾರದ ನಡುವೆ ನಡೆಯಲಿರುವ ಮಾತುಕತೆ ಹೆಚ್ಚಿನ ಮಹತ್ವ ಪಡೆದಿದೆ.