ನೆರವು ಸಾಮಾಗ್ರಿಗಳಿಗಾಗಿ ಕಾದುನಿಂತಿದ್ದ ಫೆಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ಗುಂಡು ಹಾರಾಟ; ಕನಿಷ್ಠ 46 ಮಂದಿ ಬಲಿ
File Photo: PTI
ದೇರ್ ಅಲ್-ಬಲಾಹ್,ಜು.30: ಗಾಝಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿ ಹಾಗೂ ಗುಂಡುಹಾರಾಟಗಳಲ್ಲಿ ಕನಿಷ್ಠ 46 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಬಹುತೇಕ ಮಂದಿ ಆಹಾರವನ್ನು ಪಡೆದುಕೊಳ್ಳಲು ಜಮಾವಣೆಗೊಂಡಿದ್ದ ಜನರ ಗುಂಪಿನಲ್ಲಿದ್ದವರೆಂದು ಸ್ಥಳೀಯ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ ಈ ದಾಳಿಗಳ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ತಾನು ಬಂಡುಕೋರರನ್ನು ಮಾತ್ರವೇ ಗುರಿಯಿರಿಸಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ದಟ್ಟ ಜನಸಾಂಧ್ರತೆಯ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಹಮಾಸ್ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪುತ್ತಿದ್ದಾರೆಂದು ಅದು ಹೇಳಿದೆ.
ವಾಯವ್ಯ ಗಾಝಾದಲ್ಲಿರುವ ಝಿಕೀಂ ಕ್ರಾಸಿಂಗ್ನಿಂದ ನೆರವು ಸಾಮಾಗ್ರಿಗಳನ್ನು ಹೊತ್ತು ತರುತ್ತಿದ್ದ ಟ್ರಕ್ಗಳಿಗಾಗಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿದ್ದರಿಂದ ಮೃತಪಟ್ಟ 12 ಮಂದಿಯ ಶವಗಳನ್ನು ತನ್ನಲ್ಲಿಗೆ ತರಲಾಗಿದೆಯಂದು ಗಾಝಾ ನಗರದ ಶಿಫಾ ಆಸ್ಪತ್ರೆಯ ಹೇಳಿಕೆಯೊಂದು ತಿಳಿಸಿದೆ.
ಜಬಲಿಯಾ ನಿರಾಶ್ರಿತ ಶಿಬಿರದಲ್ಲಿ ಹಾಗೂ ಉತ್ತರ ಭಾಗದ ನಗರಗಳಾದ ಬೆಯಿಟ್ ಲಾಹಿಯಾ ಮತ್ತು ಬೆಯಿಟ್ ಹನೂನ್ನಲ್ಲಿ ಇಸ್ರೇಲ್ ಪಡೆಗಳ ದಾಳಿಗೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಖಾನ್ಯೂನಿಸ್ನಲ್ಲಿ ನೂತನವಾಗಿ ನಿರ್ಮಿಸಲಾದ ಮೊರಾಗ್ ಕಾರಿಡಾರ್ನಲ್ಲಿ ನೆರವು ಪೂರೈಕೆಯ ಟ್ರಕ್ಗಳಿಗಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ನಾಸೆರ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.