ಗಾಝಾ ಕದನ ವಿರಾಮ: ಹೊಸ ಪ್ರಸ್ತಾಪ ತಿರಸ್ಕರಿಸಿದ ಇಸ್ರೇಲ್
ಸಾಂದರ್ಭಿಕ ಚಿತ್ರ | PC : NDTV
ಜೆರುಸಲೇಂ: ಗಾಝಾದಲ್ಲಿ ತಕ್ಷಣ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯ ಹೊಸ ಪ್ರಸ್ತಾಪವನ್ನು ಇಸ್ರೇಲ್ ತಿರಸ್ಕರಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
ಇಸ್ರೇಲ್ ಸ್ವೀಕರಿಸಿದ ಪ್ರಸ್ತಾಪವನ್ನು ಯಾವುದೇ ಜವಾಬ್ದಾರಿಯುತ ಸರ್ಕಾರ ಒಪ್ಪಲು ಸಾಧ್ಯವಿಲ್ಲ. ಹಮಾಸ್‍ಗೆ ಶರಣಾಗತಿ ಎಂಬ ಕಾರಣಕ್ಕೆ ಹೊಸ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮುಂದಿರಿಸಿರುವ ಪರಿಕಲ್ಪನೆಗೆ ಇಸ್ರೇಲ್ ಬದ್ಧವಾಗಿರುತ್ತದೆ ಎಂದು ಮೂಲಗಳು ಹೇಳಿವೆ.
ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ 50 ದಿನಗಳ ಕದನ ವಿರಾಮ ಮತ್ತು ಗಾಝಾ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಮಾತುಕತೆ- ಇದು ವಿಟ್ಕಾಫ್ ಸೂಚಿಸಿರುವ ಯೋಜನೆಯಾಗಿದೆ. ಅಮೆರಿಕ ಮಂಡಿಸಿದ ಈ ಪ್ರಸ್ತಾಪದಲ್ಲಿ ಇಸ್ರೇಲ್ ಗಾಝಾ ಪಟ್ಟಿಯಿಂದ ಹಿಂದೆ ಸರಿಯುವ ಅಥವಾ ಇಸ್ರೇಲ್ ಜೈಲಿನಲ್ಲಿರುವ ಫೆಲೆಸ್ತೀನಿಯನ್ ಕೈದಿಗಳ ಬಿಡುಗಡೆಯ ಅಂಶ ಸೇರಿಲ್ಲ.
ಗಾಝಾ: ಮಾನವೀಯ ನೆರವು ಸಂಸ್ಥೆಯ ಮುಖ್ಯಸ್ಥ ರಾಜೀನಾಮೆ (ವಾ/ಫೇ)
ಗಾಝಾ: ಗಾಝಾದಲ್ಲಿ ಅಮೆರಿಕ ಬೆಂಬಲಿತ ನೆರವು ವಿತರಣೆಯ ಕಾರ್ಯಕ್ಕೆ ನಿಯೋಜನೆಗೊಂಡಿರುವ ಖಾಸಗಿ ಸಂಸ್ಥೆ `ಗಾಝಾ ಮಾನವೀಯ ಪ್ರತಿಷ್ಠಾನ'ದ ಕಾರ್ಯನಿರ್ವಾಹಕ ನಿರ್ದೇಶಕ ಜೇಕ್ ವುಡ್ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿ ಮಾನವೀಯ ನೆರವು ವಿತರಣೆಗೆ ಇಸ್ರೇಲ್ ಆರಂಭಿಸಿದ, ಅಮೆರಿಕ ಬೆಂಬಲಿತ ಖಾಸಗಿ ಯೋಜನೆಯ ಮುಖ್ಯಸ್ಥರಾಗಿ ಕಳೆದ 2 ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಪ್ರಜೆ ಜೇಕ್ ವುಡ್ `ತನಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಾನವೀಯತೆ, ನಿಷ್ಪಕ್ಷಪಾತ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ತ್ಯಜಿಸಲು ಸಾಧ್ಯವಿಲ್ಲದ ಕಾರಣ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ವುಡ್ ಅವರ ರಾಜೀನಾಮೆಯಿಂದ ನಿರಾಶೆಯಾಗಿದೆ. ಆದರೆ ಗಾಝಾ ಪ್ರದೇಶದ ಸಂಪೂರ್ಣ ಜನಸಂಖ್ಯೆಗೆ ನೆರವು ತಲುಪಿಸಲು ನಾವು ಬದ್ಧವಾಗಿದ್ದೇವೆ. ನಮ್ಮ ಟ್ರಕ್ ಗಳು ಸಿದ್ಧವಾಗಿ ನಿಂತಿವೆ ಎಂದು ಗಾಝಾ ಮಾನವೀಯ ಪ್ರತಿಷ್ಠಾನ ಹೇಳಿಕೆ ನೀಡಿದೆ.