×
Ad

ಗಾಝಾದಲ್ಲಿ ಸೇನೆಯ ಉಪಸ್ಥಿತಿ ಮುಂದುವರಿಸಲು ಇಸ್ರೇಲ್ ಪಟ್ಟು; ಕದನ ವಿರಾಮ ಮಾತುಕತೆಗೆ ತೊಡಕು: ಹಮಾಸ್ ಆರೋಪ

Update: 2025-07-10 22:52 IST

ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದದ ಬಗ್ಗೆ ಮಾತುಕತೆ ಮುಂದುವರಿದಿರುವಂತೆಯೇ ಗಾಝಾ ಪಟ್ಟಿಯ ದಕ್ಷಿಣ ಕಾರಿಡಾರ್‌ ನಲ್ಲಿ ತನ್ನ ಪಡೆಗಳ ಉಪಸ್ಥಿತಿಯನ್ನು ಮುಂದುವರಿಸಲು ಇಸ್ರೇಲ್ ಪಟ್ಟು ಹಿಡಿದಿರುವುದು ಮಾತುಕತೆಯನ್ನು ಹಳಿತಪ್ಪಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

60 ದಿನಗಳ ಕದನ ವಿರಾಮದ ಸಂದರ್ಭದಲ್ಲಿ ಮೊರಾಗ್ ಕಾರಿಡಾರ್ ಸೇರಿದಂತೆ ಗಾಝಾ ಪಟ್ಟಿಯಲ್ಲಿ ಪಡೆಗಳನ್ನು ಇರಿಸಿಕೊಳ್ಳುವುದು ಇಸ್ರೇಲ್‌ ನ ಉದ್ದೇಶವಾಗಿದೆ ಎಂದು ಇಸ್ರೇಲ್‌ ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೊರಾಗ್ ಕಾರಿಡಾರ್‌ ನಲ್ಲಿ ಒಂದು ಹೆಜ್ಜೆಯನ್ನು ಇಡುವುದು (ಈಜಿಪ್ಟ್‍ನ ಗಡಿಯುದ್ದಕ್ಕೂ ದಕ್ಷಿಣದ ಕಿರಿದಾದ ಭೂಮಿಯ ಕಡೆಗೆ ನೂರಾರು ಫೆಲೆಸ್ತೀನೀಯರನ್ನು ಸ್ಥಳಾಂತರಿಸುವ ಉದ್ದೇಶದಿಂದ) ಇಸ್ರೇಲ್‌ ನ ಯೋಜನೆಗಳಲ್ಲಿ ಒಂದು ಪ್ರಮುಖ ಅಂಶವಾಗಿದೆ. ಈ ನಡೆಯು ಗಾಝಾದ ಜನಸಂಖ್ಯೆಯ ಸುಮಾರು 2 ದಶಲಕ್ಷ ಜನರ ಬಲವಂತದ ಸ್ಥಳಾಂತರಕ್ಕೆ ಒಂದು ಪೂರ್ವಸೂಚಕವಾಗಿದೆ ಮತ್ತು ಭೂಪ್ರದೇಶದ ಮೇಲೆ ಶಾಶ್ವತವಾದ ನಿಯಂತ್ರಣವನ್ನು ಕಾಯ್ದುಕೊಳ್ಳುವ ಇಸ್ರೇಲಿ ಸರಕಾರದ ಯೋಜನೆಯ ಭಾಗವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ದಕ್ಷಿಣ ಗಾಝಾದಲ್ಲಿನ ರಫಾ ನಗರದ ಕಡೆಗೆ ಫೆಲೆಸ್ತೀನೀಯರನ್ನು ಸಾಮೂಹಿಕವಾಗಿ ಸ್ಥಳಾಂತರಿಸುವ ಇಸ್ರೇಲ್‌ ನ ಯೋಜನೆಗಳನ್ನು ಫೆಲೆಸ್ತೀನಿಯನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿಯ ಮುಖ್ಯಸ್ಥರು ಖಂಡಿಸಿದ್ದಾರೆ.

ಗಾಝಾದಿಂದ ಇಸ್ರೇಲ್‌ ನ ಎಲ್ಲಾ ಪಡೆಗಳೂ ವಾಪಸಾಗುವುದು ಶಾಶ್ವತ ಕದನ ವಿರಾಮ ಒಪ್ಪಂದದ ಭಾಗವಾಗಬೇಕು ಎಂದು ಹಮಾಸ್ ಹೇಳುತ್ತಿದೆ. ಗಾಝಾದೊಳಗೆ ಇಸ್ರೇಲ್‌ ನ ಶಾಶ್ವತ ಉಪಸ್ಥಿತಿಯನ್ನು ಹಮಾಸ್ ವಿರೋಧಿಸಿದೆ. ಪ್ರಸ್ತಾವಿತ ಒಪ್ಪಂದದ ಭಾಗವಾಗಿ 60 ದಿನದ ಕದನ ವಿರಾಮ ಜಾರಿಯಲ್ಲಿರುತ್ತದೆ ಮತ್ತು ಈ ಅವಧಿಯಲ್ಲಿ ಕೆಲವು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಗಾಝಾಕ್ಕೆ ಮತ್ತಷ್ಟು ನೆರವು ಪೂರೈಕೆಯಾಗುತ್ತದೆ.

ಗಾಝಾದಲ್ಲಿ ಸೇನೆಯನ್ನು ಉಳಿಸಿಕೊಳ್ಳುವ ಇಸ್ರೇಲ್‌ ನ ಆಶಯ ಸೇರಿದಂತೆ ಕದನ ವಿರಾಮ ಒಪ್ಪಂದಕ್ಕೆ ಅಡ್ಡಿಯಾಗಬಹುದಾದ ಅಂಶಗಳ ಬಗ್ಗೆ ಮಂಗಳವಾರ ಅಮೆರಿಕ, ಇಸ್ರೇಲ್ ಮತ್ತು ಖತರ್‌ ನ ಅಧಿಕಾರಿಗಳು ವಿಸ್ತøತ ಚರ್ಚೆ ನಡೆಸಿದ್ದಾರೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.

► ಮೊರಾಗ್ ಕಾರಿಡಾರ್

ಗಾಝಾದಲ್ಲಿ 21 ತಿಂಗಳ ಸಂಘರ್ಷದಲ್ಲಿ ಇಸ್ರೇಲಿ ಪಡೆಗಳು ಮೂರು ಪೂರ್ವ-ಪಶ್ಚಿಮ ಕಾರಿಡಾರ್‍ಗಳನ್ನು ಒಳಗೊಂಡಂತೆ ವ್ಯಾಪಕವಾದ ಭೂಮಿಯನ್ನು ವಶಪಡಿಸಿಕೊಂಡಿವೆ. ಎಪ್ರಿಲ್‌ ನಲ್ಲಿ ವಶಪಡಿಸಿಕೊಂಡ ಮೊರಾಗ್ ಕಾರಿಡಾರ್ ಗಾಝಾದ ದಕ್ಷಿಣದ ತುತ್ತತುದಿಯ ನಗರ ರಫಾ ಮತ್ತು ಖಾನ್ ಯೂನಿಸ್ ನಗರಗಳ ನಡುವೆ ಇದೆ. ಗಾಝಾ-ಈಜಿಪ್ಟ್ ಗಡಿಯುದ್ದಕ್ಕೂ ಇರುವ ಫಿಲಾಡೆಲ್ಫಿ ಕಾರಿಡಾರ್ ಮತ್ತು ಉತ್ತರ ಗಾಝಾದ ನೆಟ್‍ಝರಿಮ್ ಕಾರಿಡಾರ್‌ ನ ಮೇಲೆಯೂ ಇಸ್ರೇಲ್ ನಿಯಂತ್ರಣ ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News