ಗಾಝಾ ನಗರವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನಿಂದ ದಾಳಿ : ಕನಿಷ್ಠ 34 ಮಂದಿ ಮೃತ್ಯು
Update: 2025-09-21 20:58 IST
PC : aljazeera.com
ಗಾಝಾ, ಸೆ.21: ಗಾಝಾ ನಗರದಲ್ಲಿ ಶನಿವಾರ ರಾತ್ರಿಯಿಂದ ಇಸ್ರೇಲ್‌ನ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 34 ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ರವಿವಾರ ಹೇಳಿದೆ.
ಗಾಝಾ ನಗರದ ದಕ್ಷಿಣ ಭಾಗದಲ್ಲಿ ವಸತಿ ಕಟ್ಟಡವೊಂದರ ಮೇಲೆ ಶನಿವಾರ ತಡರಾತ್ರಿ ಇಸ್ರೇಲ್‌ನ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಶಿಫಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಅವರ ಪತ್ನಿ ಹಾಗೂ ಮೂವರು ಮಕ್ಕಳೂ ಸೇರಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಈ ಮಧ್ಯೆ, ಗಾಝಾ ನಗರದಲ್ಲಿ ಹಮಾಸ್ ಸದಸ್ಯರನ್ನು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಮುಂದುವರಿದಿದ್ದು ಹಮಾಸ್‌ನ ಮಿಲಿಟರಿ ವಿಭಾಗದ ಶಾರ್ಪ್‌ಶ್ಯೂಟರ್ ಮಜೀದ್ ಅಬು ಸೆಲ್ಮಿಯಾ ಅವರನ್ನು ಹತ್ಯೆ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ರವಿವಾರ ಹೇಳಿಕೆ ನೀಡಿದೆ.