×
Ad

ಗಾಝಾ ನಗರವನ್ನು ಸಂಪೂರ್ಣ ತೆರವುಗೊಳಿಸುವಂತೆ ಫೆಲೆಸ್ತೀನಿಯರಿಗೆ ಇಸ್ರೇಲ್ ಆದೇಶ

Update: 2025-09-09 23:08 IST

PC : aljazeera.com

ದೆಯಿರ್ ಅಲ್‌ ಬಲಹ್ , ಸೆ.9: ಎಲ್ಲಾ ನಾಗರಿಕರು ಸಂಪೂರ್ಣವಾಗಿ ಗಾಝಾ ನಗರವನ್ನು ತೊರೆಯುವಂತೆೆ ಇಸ್ರೇಲ್ ಸೇನೆ ಮಂಗಳವಾರ ಆದೇಶ ನೀಡಿದೆ.

ಗಾಝಾಪಟ್ಟಿಯ ಉತ್ತರಭಾಗದಲ್ಲಿ ಆಕ್ರಮಣವನ್ನು ತೀವ್ರಗೊಳಿಸಲು ಇಸ್ರೇಲ್ ಕೈಗೊಂಡಿರುವ ಯೋಜನೆಗೆ ಪೂರ್ವಭಾವಿಯಾಗಿ ಇಸ್ರೇಲ್ ಸೇನೆ ಈ ಹೇಳಿಕೆ ನೀಡಿದೆ. ಗಾಝಾನಗರದ ನಿವಾಸಿಗಳು ಭೀಕರ ಕ್ಷಾಮದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಆಹಾರ ಹಾಗೂ ಅಗತ್ಯವಸ್ತುಗಳಿಗಾಗಿ ಸಾವಿರಾರು ಜನರು ದಿನವೂ ಪರದಾಡುತ್ತಿರುವಾಗಲೇ, ಇಸ್ರೇಲ್ ಸೇನೆ ಆ ಪ್ರದೇಶದಲ್ಲಿ ದಾಳಿ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆೆಯನ್ನು ಹಮ್ಮಿಕೊಂಡಿದೆ.

ಇದಕ್ಕೂ ಮುನ್ನ ಇಸ್ರೇಲ್ ಸೇನೆಯು ತಾನು ಕೇಂದ್ರೀಕೃತ ಕಾರ್ಯಾಚರಣೆ ನಡೆಸುತ್ತಿರುವ ಗಾಝಾನಗರದ ನಿರ್ದಿಷ್ಟ ಪ್ರದೇಶಗಳಲ್ಲಿನ ಜನರು ತೆರವುಗೊಳ್ಳುವಂತೆ ಸೂಚಿಸಿತ್ತು. ಮಂಗಳವಾರ ಭಾರೀ ಸಂಖ್ಯೆಯ ಕಾರುಗಳು ಹಾಗೂ ಟ್ರಕ್‌ಗಳಲ್ಲಿ ಫೆಲೆಸ್ತೀನ್ ನಾಗರಿಕರು ಉತ್ತರಗಾಝದಿಂದ ದಕ್ಷಿಣ ಗಾಝಾಕ್ಕೆ ತೆರಳುತ್ತಿರುವುದು ಕಂಡುಬಂದಿರುವುದಾಗಿ ‘ಆಸೋಸಿಯೇಟೆಡ್ ಪ್ರೆಸ್’ ಸುದ್ದಿಸಂಸ್ಥೆಯ ವರದಿಗಾರರು ತಿಳಿಸಿದ್ದಾರೆ.

ಈ ಮಧ್ಯೆ ಗಾಝಾನಗರದಲ್ಲಿರುವ ಬಹುಅಂತಸ್ತಿನ 30 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆಯೆಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರಾಯೇಲ್ ಕಾಟ್ಝ್ ಅವರು ತಿಳಿಸಿದ್ದಾರೆ.

ಹಮಾಸ್‌ ನ ಕಟ್ಟ ಕಡೆಯ ಭದ್ರಕೋಟೆಯಾಗಿ ಉಳಿದಿರುವ ಗಾಝಾನಗರದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದ ಭಾಗವಾಗಿ ಇಸ್ರೇಲ್ ಈ ಕಟ್ಟಡಗಳ ನೆಲಸಮ ಕಾರ್ಯಾಚರಣೆಯನ್ನು ಕೈಗೊಂಡಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News