×
Ad

ದಕ್ಷಿಣ ಸುಡಾನ್‌ ಗೆ ಫೆಲೆಸ್ತೀನೀಯರ ಸ್ಥಳಾಂತರಕ್ಕೆ ಇಸ್ರೇಲ್ ಯೋಜನೆ: ವರದಿ

Update: 2025-08-14 20:20 IST

PC | Reuters

ಟೆಲ್‍ಅವೀವ್, ಆ.14: ಗಾಝಾ ಪಟ್ಟಿಯಿಂದ ಫೆಲೆಸ್ತೀನೀಯರನ್ನು ಯುದ್ಧದಿಂದ ಜರ್ಝರಿತಗೊಂಡಿರುವ ಮತ್ತು ಕ್ಷಾಮದ ಅಂಚಿನಲ್ಲಿರುವ ಪೂರ್ವ ಆಫ್ರಿಕಾದ ದೇಶ ದಕ್ಷಿಣ ಸುಡಾನ್‌ ಗೆ ಸ್ಥಳಾಂತರಿಸುವ ಸಾಧ್ಯತೆಯ ಬಗ್ಗೆ ಇಸ್ರೇಲ್ ಸಮಾಲೋಚನೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಈ ಕುರಿತ ಮಾತುಕತೆ ಮುಂದುವರಿದಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಒಂದು ವೇಳೆ ಯೋಜನೆ ಜಾರಿಗೊಂಡರೆ ಯುದ್ಧದಿಂದ ಜರ್ಝರಿತಗೊಂಡಿರುವ ಒಂದು ಪ್ರದೇಶದಿಂದ ಜನರನ್ನು ಮತ್ತೊಂದು ಯುದ್ಧಗ್ರಸ್ಥ, ಬರಗಾಲದ ಅಪಾಯದಲ್ಲಿರುವ ಪ್ರದೇಶಕ್ಕೆ ಸಾಮೂಹಿಕ ಸ್ಥಳಾಂತರಗೊಳಿಸಿದಂತಾಗುತ್ತದೆ ಎಂದು ಮಾನವ ಹಕ್ಕುಗಳ ಪ್ರತಿಪಾದಕರು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಝಾದ ಬಹುತೇಕ ಜನಸಂಖ್ಯೆಯನ್ನು `ಸ್ವಯಂಪ್ರೇರಿತ ವಲಸೆ'ಯ ಮೂಲಕ ಸ್ಥಳಾಂತರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಿಕಲ್ಪನೆಯನ್ನು ಸಾಕಾರಗೊಳಿಸಲು ತಾನು ಬಯಸಿದ್ದು ಆಫ್ರಿಕಾದ ಇತರ ದೇಶಗಳೊಂದಿಗೂ ಈ ಬಗ್ಗೆ ಪ್ರಸ್ತಾಪಿಸಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. `ಹೀಗೆ ಮಾಡುವುದು ಸರಿಯಾದ ಕ್ರಮವೆಂದು ನಾನು ಭಾವಿಸುತ್ತೇನೆ. ಯುದ್ಧದ ನಿಯಮಗಳ ಪ್ರಕಾರ ಜನಸಂಖ್ಯೆಗೆ ನಿರ್ಗಮಿಸಲು ಅವಕಾಶ ನೀಡಬೇಕು ಮತ್ತು ಆ ಬಳಿಕ ಅಲ್ಲಿ ಉಳಿದಿರುವ ಶತ್ರುಗಳ ಮೇಲೆ ಎಲ್ಲಾ ಬಲಪ್ರಯೋಗಿಸಿ ಪ್ರಹಾರ ನೀಡಬೇಕು' ಎಂದು ಇಸ್ರೇಲ್‌ ನ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನೆತನ್ಯಾಹು ಪ್ರತಿಪಾದಿಸಿದ್ದಾರೆ.

ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಬಲವಂತವಾಗಿ ಹೊರಹಾಕುವ ಯೋಜನೆಯ ನೀಲನಕ್ಷೆ ಇದಾಗಿದೆ ಎಂದು ಫೆಲೆಸ್ತೀನೀಯರು, ಮಾನವ ಹಕ್ಕುಗಳ ಗುಂಪುಗಳು ಹಾಗೂ ಅಂತರಾಷ್ಟ್ರೀಯ ಸಮುದಾಯ ಖಂಡಿಸಿದೆ.

ಇಸ್ರೇಲ್‍ನೊಂದಿಗೆ ನಿಕಟ ಸಂಬಂಧ ಸಾಧಿಸಿದರೆ ಇಸ್ರೇಲ್‌ ನ ಮಿತ್ರರಾಷ್ಟ್ರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸ ಗಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ದಕ್ಷಿಣ ಸುಡಾನ್ ಈ ಪ್ರಸ್ತಾಪಕ್ಕೆ ಸಮ್ಮತಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಈ ಮಧ್ಯೆ, ದಕ್ಷಿಣ ಸುಡಾನ್‌ ನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಇಸ್ರೇಲ್‌ ನ ಉಪ ವಿದೇಶಾಂಗ ಸಚಿವೆ ಶರೀನ್ ಹಸ್ಕೆಲ್ ಹೇಳಿದ್ದಾರೆ.

►ಹಲವು ದೇಶಗಳೊಂದಿಗೆ ಮಾತುಕತೆ

ಗಾಝಾದಲ್ಲಿನ ಯುದ್ಧದಿಂದ ಸ್ಥಳಾಂತರಗೊಳ್ಳುವ ಫೆಲೆಸ್ತೀನೀಯರನ್ನು ಸ್ವೀಕರಿಸುವ ಬಗ್ಗೆ ಹಲವು ದೇಶಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ದಕ್ಷಿಣ ಸುಡಾನ್, ಸೊಮಾಲಿಯಾ, ಇಥಿಯೋಪಿಯಾ, ಲಿಬಿಯಾ ಮತ್ತು ಇಂಡೋನೇಶ್ಯಾಗಳ ಜೊತೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ಗಾಝಾದ ಕೆಲವು ಜನಸಂಖ್ಯೆಗೆ ಆಶ್ರಯ ಕಲ್ಪಿಸಿದರೆ ಅದಕ್ಕೆ ಪ್ರತಿಯಾಗಿ ಮಹತ್ವದ ಆರ್ಥಿಕ ಮತ್ತು ಅಂತರಾಷ್ಟ್ರೀಯ ಪರಿಹಾರವನ್ನು ಒದಗಿಸುವ ಉದ್ದೇಶವಿದೆ ಎಂದು ಇಸ್ರೇಲ್‌ ನ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ. ಚಿಕಿತ್ಸೆಗಾಗಿ ಗಾಝಾದಿಂದ 2,000 ಫೆಲೆಸ್ತೀನೀಯರನ್ನು ಸ್ವೀಕರಿಸಲು ಸಿದ್ಧ. ಆದರೆ ಚೇತರಿಸಿಕೊಂಡ ಬಳಿಕ ಅವರು ಗಾಝಾಕ್ಕೆ ಹಿಂತಿರುಗುತ್ತಾರೆ ಎಂದು ಕಳೆದ ವಾರ ಇಂಡೊನೇಶ್ಯಾ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News