ಗಾಝಾದಲ್ಲಿ ಯುದ್ಧ ಕೊನೆಗೊಳಿಸುವ ಟ್ರಂಪ್ ಯೋಜನೆಯ 'ಮೊದಲ ಹಂತ' ಜಾರಿಗೆ ಸಿದ್ಧತೆ ನಡೆಸುತ್ತಿದ್ದೇವೆ : ಇಸ್ರೇಲ್ ಪ್ರಧಾನಿ ನೆತನ್ಯಾಹು
ಬೆಂಜಮಿನ್ ನೆತನ್ಯಾಹು | NDTV
ದೇರ್ ಅಲ್-ಬಲಾಹ್ : ಗಾಝಾದಲ್ಲಿ ಯುದ್ಧ ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯ ಮೊದಲ ಹಂತವನ್ನು ಜಾರಿಗೆ ತರಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ತನ್ನ ತತ್ವಗಳಿಗೆ ಅನುಗುಣವಾಗಿ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಅವರೊಂದಿಗೆ ಸಂಪೂರ್ಣ ಸಹಕಾರದಲ್ಲಿ ಕೆಲಸ ಮಾಡುತ್ತದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಹಮಾಸ್ ಟ್ರಂಪ್ ಅವರ ಶಾಂತಿ ಯೋಜನೆಯ ಕೆಲವು ಅಂಶಗಳನ್ನು ಒಪ್ಪಿಕೊಂಡು ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಸಮ್ಮತಿಸಿದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಗಾಝಾ ಪಟ್ಟಿಯ ಮೇಲೆ ಬಾಂಬ್ ದಾಳಿ ಮಾಡುವುದನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಆದೇಶಿಸಿದ್ದಾರೆ.
“ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಾವು ಸಿದ್ಧರಾಗಿದ್ದೇವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ವಿನಿಮಯ ಸೂತ್ರದ ಪ್ರಕಾರ ಈ ಪ್ರಕ್ರಿಯೆಯನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ” ಎಂದು ಹಮಾಸ್ ತಿಳಿಸಿದೆ.
ಈ ಕುರಿತ ವಿವರಗಳನ್ನು ಚರ್ಚಿಸಲು ಮಧ್ಯವರ್ತಿಗಳ ಮೂಲಕ ತಕ್ಷಣ ಮಾತುಕತೆಗೆ ನಡೆಸಲು ಹಮಾಸ್ ಸಿದ್ಧವಿದೆ ಎಂದು ಹೇಳಿದೆ. ಜೊತೆಗೆ, “ಫೆಲೆಸ್ತೀನ್ ನ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅರಬ್-ಇಸ್ಲಾಮಿಕ್ ಬೆಂಬಲದೊಂದಿಗೆ ಗಾಝಾದ ಆಡಳಿತವನ್ನು ಫೆಲೆಸ್ತೀನ್ ನ ಸ್ವತಂತ್ರ ಸಂಸ್ಥೆಗೆ ಹಸ್ತಾಂತರಿಸಲು ನಾವು ಸಿದ್ಧರಿದ್ದೇವೆ ಎಂದು ಹಮಾಸ್ ತಿಳಿಸಿದೆ.