×
Ad

ಗಾಝಾದ ಮೇಲಿನ ಮುತ್ತಿಗೆ ಬಿಗಿಗೊಳಿಸಿದ ಇಸ್ರೇಲ್ : ಶಾಲೆ, ಆಸ್ಪತ್ರೆ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತ್ಯು

Update: 2025-10-02 20:49 IST

 Photo Credit: X \ @shameensuleman

ಗಾಝಾ, ಅ.2: ಹಮಾಸ್ ವಿರುದ್ಧದ ಮಿಲಿಟರಿ ಆಕ್ರಮಣವು ತೀವ್ರಗೊಂಡಿದ್ದು ಗಾಝಾವನ್ನು ಉಳಿದ ಪ್ರದೇಶದಿಂದ ಪ್ರತ್ಯೇಕಗೊಳಿಸಲು ಇಸ್ರೇಲ್ ಸೇನೆ ಗಾಝಾದ ಮೇಲಿನ ಮುತ್ತಿಗೆಯನ್ನು ತೀವ್ರಗೊಳಿಸಿದೆ ಎಂದು ಇಸ್ರೇಲ್‍ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಟ್ರಂಪ್ ಮುಂದಿರಿಸಿರುವ ಶಾಂತಿ ಯೋಜನೆಯನ್ನು ತಾನು ತಿರಸ್ಕರಿಸಬಹುದು ಎಂದು ಹಮಾಸ್ ಸೂಚನೆ ನೀಡಿದ ಬೆನ್ನಲ್ಲೇ ಇಸ್ರೇಲ್‍ನ ರಕ್ಷಣಾ ಸಚಿವರ ಘೋಷಣೆ ಹೊರಬಿದ್ದಿದೆ.

ಗಾಝಾದಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ ವ್ಯಾಪಿಸಿರುವ ಮಿಲಿಟರಿ ರಸ್ತೆ `ನೆಟ್‍ಜಾರಿಮ್ ಕಾರಿಡಾರ್' ಅನ್ನು ಮೆಡಿಟರೇನಿಯನ್ ಕರಾವಳಿಗೆ ವಿಸ್ತರಿಸಲಾಗಿದೆ. ಈ ಕ್ರಮವು ಹಮಾಸ್‍ನ ಕೊನೆಯ ಭದ್ರಕೋಟೆ ಗಾಝಾ ನಗರವನ್ನು ಪರಿಣಾಮಕಾರಿಯಾಗಿ ಸೀಲ್ ಮಾಡಿದೆ. ಇದು ಗಾಝಾ ನಗರದ ಸುತ್ತಲಿನ ಮುತ್ತಿಗೆಯನ್ನು ಬಿಗಿಗೊಳಿಸಲಿದೆ ಮತ್ತು ದಕ್ಷಿಣದತ್ತ ತೆರಳುವವರು ಇಸ್ರೇಲ್ ಭದ್ರತಾ ಪಡೆ(ಐಡಿಎಫ್)ನ ಚೆಕ್‍ಪೋಸ್ಟ್ ಮೂಲಕ ಸಾಗುವ ಅನಿವಾರ್ಯತೆಯಿದೆ ಎಂದು ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ನಗರದಿಂದ ಸ್ಥಳಾಂತರಗೊಳ್ಳದ ನಿವಾಸಿಗಳನ್ನು ಭಯೋತ್ಪಾದಕರು ಮತ್ತು ಭಯೋತ್ಪಾದನೆಯ ಬೆಂಬಲಿಗರೆಂದು ಪರಿಗಣಿಸಲಾಗುತ್ತದೆ ಎಂದವರು ಎಚ್ಚರಿಕೆ ನೀಡಿದ್ದಾರೆ.

ಗಾಝಾ ನಗರದಲ್ಲಿ ಉಳಿದಿರುವ ಎಲ್ಲಾ ಫೆಲೆಸ್ತೀನೀಯರಿಗೆ ನಗರದಿಂದ ನಿರ್ಗಮಿಸಲು ಅಂತಿಮ ಅವಕಾಶ ನೀಡಲಾಗುತ್ತದೆ. ಆ ಬಳಿಕವೂ ನಗರದಲ್ಲೇ ಉಳಿದವರು ಇಸ್ರೇಲ್‍ನ ಪೂರ್ಣ ಬಲಬಳಸುವ ಕಾರ್ಯಾಚರಣೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಗಾಝಾ ನಗರದಲ್ಲಿ ಪ್ರತ್ಯೇಕಿಸಲ್ಪಡುವ ಹಮಾಸ್ ಕಾರ್ಯಕರ್ತರನ್ನು ತೊರೆದು ತಕ್ಷಣ ದಕ್ಷಿಣದತ್ತ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ರಕ್ಷಣಾ ಪಡೆ ಸೂಚಿಸಿದೆ.

ಶಾಲೆ, ಆಸ್ಪತ್ರೆ ಮೇಲೆ ದಾಳಿ

ಗಾಝಾ ಶಾಂತಿ ಯೋಜನೆಯ ಬಗ್ಗೆ ಹಮಾಸ್ ನಾಯಕರು ಸಮಾಲೋಚನೆ ನಡೆಸುತ್ತಿರುವಂತೆಯೇ ಗಾಝಾದ್ಯಂತ ವೈಮಾನಿಕ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದ್ದು ಬುಧವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಗಾಝಾ ನಗರದಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ಎರಡು ಕ್ಷಿಪಣಿ ದಾಳಿಗಳಲ್ಲಿ 7 ಜನರು ಮೃತಪಟ್ಟಿದ್ದು, 36ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಲ್-ಅಖ್ಸಾ ಆಸ್ಪತ್ರೆಯ ಹೊರಗೆ ಇರುವ ಡೇರೆಯ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News