×
Ad

ಗಾಝಾ ನಗರವನ್ನು ವಶಪಡಿಸಿಕೊಳ್ಳಲು 60,000 ಮೀಸಲು ಯೋಧರನ್ನು ಕರೆಸಿಕೊಳ್ಳಲು ಇಸ್ರೇಲ್ ಯೋಜನೆ

Update: 2025-08-20 19:41 IST

PC :aljazeera.com

ಗಾಝಾ ಪಟ್ಟಿ/ಟೆಲ್ ಅವೀವ್: ಮಧ್ಯಸ್ಥಿಕೆದಾರರು ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ 22 ತಿಂಗಳ ಯುದ್ಧಕ್ಕೆ ಕದನ ವಿರಾಮ ಸ್ಥಾಪಿಸಲು ಪ್ರಯತ್ನಗಳನ್ನು ಮುಂದುವರಿಸಿರುವಾಗಲೇ ಗಾಝಾ ನಗರವನ್ನು ವಶಪಡಿಸಿಕೊಳ್ಳಲು 60,000 ಮೀಸಲು ಯೋಧರನ್ನು ಕರೆಸಿಕೊಳ್ಳುವ ಯೋಜನೆಯೊಂದನ್ನು ಇಸ್ರೇಲ್ ರೂಪಿಸಿದೆ ಎಂದು Aljazeera.com ವರದಿ ಮಾಡಿದೆ.

ಗಾಝಾದ ಅಪಾರ ಜನದಟ್ಟಣೆಯುಳ್ಳ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಯೋಜನೆಯೊಂದಕ್ಕೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಝ್ ಅನುಮೋದನೆ ನೀಡಿದ್ದಾರೆ ಎಂದು ಬುಧವಾರ ಇಸ್ರೇಲ್ ಸೇನೆ ಹೇಳಿದೆ.

ಇದಕ್ಕಾಗಿ 60,000 ಮೀಸಲು ಯೋಧರನ್ನು ಕರೆಸಿಕೊಳ್ಳುವ ಸಾಧ್ಯತೆ ಇದ್ದು, ಕಾರ್ಯಾಚರಣೆ ವಿಸ್ತರಣೆಗೊಂಡಂತೆ ಹೆಚ್ಚುವರಿಯಾಗಿ 20,000 ಮೀಸಲು ಯೋಧರನ್ನು ಕರೆಸಿಕೊಳ್ಳಲು ಯೋಜಿಸಲಾಗಿದೆ ಎಂದೂ ಇಸ್ರೇಲ್ ಸೇನೆ ತಿಳಿಸಿದೆ.

ಗಾಝಾ ನಗರದಲ್ಲಿ ವ್ಯಾಪಕ ಬರಗಾಲ ತಲೆದೋರಿರುವುದರಿಂದ, ಹಸಿವಿನಿಂದ ಸಾವಿನ ಪ್ರಕರಣಗಳು ಮುಂದುವರಿದಿದ್ದು, ನೆರೆಹೊರೆಯ ಪ್ರದೇಶಗಳು ವಿನಾಶಗೊಂಡು, ಬಹುತೇಕ ನಿವಾಸಿಗಳು ಹಲವು ಬಾರಿ ಸ್ಥಳಾಂತರಗೊಂಡಿರುವುದರಿಂದ, ಅಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಲಿದೆ ಎಂದು ಮಾನವ ಹಕ್ಕು ಸಂಘಟನೆಗಳು ಎಚ್ಚರಿಸುತ್ತಿರುವ ಬೆನ್ನಿಗೇ ಈ ಪ್ರಕಟನೆ ಹೊರ ಬಿದ್ದಿದೆ.

ಈ ಹಿಂದೆ ಸೇನೆಯು ಕಾರ್ಯಾಚರಣೆ ನಡೆಸಿರದಿದ್ದ ಪ್ರದೇಶಗಳೂ ಸೇರಿದಂತೆ ಗಾಝಾ ನಗರದ ಸುತ್ತಮುತ್ತ ಹಂತಹಂತವಾಗಿ ನಿಖರ ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಇಸ್ರೇಲ್ ಸೇನಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈಗಾಗಲೇ ಇಸ್ರೇಲ್ ಸೇನೆಯು ಝೈಟೌನ್ ಹಾಗೂ ಜಬಾಲಿಯಾದಲ್ಲಿ ತನ್ನ ಪ್ರಾಥಮಿಕ ಹಂತದ ಯೋಜನೆಯ ಭಾಗವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News