×
Ad

ಯುದ್ಧದಲ್ಲಿ ‘ಮೃದು ಅಸ್ತ್ರ’ವಾಗಿ ಅಮೆರಿಕ ಮತ್ತು ಇಸ್ರೇಲ್ ನೆರವಿನ ರೂಪದಲ್ಲಿ ʼಓಪಿಯಾಡ್ʼ ಮಿಶ್ರಿತ ಹಿಟ್ಟು ವಿತರಿಸುತ್ತಿವೆ: ಗಾಝಾ ಸರಕಾರ

Update: 2025-06-29 15:37 IST

Photo credit: PTI

ಗಾಝಾ ಪಟ್ಟಿ: ಇಸ್ರೇಲ್‌ನ ಹಿಡಿತದಲ್ಲಿರುವ ಫೆಲೆಸ್ತೀನ್ ಪ್ರದೇಶದಲ್ಲಿ ಮಾನವೀಯ ನೆರವಿನ ಅಂಗವಾಗಿ ವಿತರಿಸಲಾಗಿರುವ ಹಿಟ್ಟಿನ ಚೀಲಗಳಲ್ಲಿ ಓಪಿಯಾಡ್‌ಗಳು (ಅಫೀಮು ಸಸ್ಯಗಳಿಂದ ಅಥವಾ ಅಫೀಮು ತರಹದ ಪರಿಣಾಮವನ್ನು ಬೀರುವ ಸಂಶ್ಲೇಷಿತ ವಸ್ತುಗಳಿಂದ ತಯಾರಿಸಿದ ನೋವು ನಿವಾರಕಗಳು) ಪತ್ತೆಯಾಗಿರುವುದು ವರದಿಯಾದ ಬಳಿಕ ಗಾಝಾ ಸರಕಾರದ ಮಾಧ್ಯಮ ಕಚೇರಿಯು ಶನಿವಾರ ಕಟುವಾದ ಹೇಳಿಕೆಯನ್ನು ಹೊರಡಿಸಿದೆ. ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ನೆರವು ವಿತರಣಾ ಕೇಂದ್ರಗಳು ಪೂರೈಸಿರುವ ಹಿಟ್ಟಿನ ಚೀಲಗಳಲ್ಲಿ ನೋವು ನಿವಾರಕ ಆಕ್ಸಿಕೊಡೋನ್ ಕಂಡು ಬಂದಿದೆ ಎಂದು ಅದು ಆರೋಪಿಸಿದೆ ಎಂದು financialexpress.com ವರದಿ ಮಾಡಿದೆ.

ಹಿಟ್ಟಿನ ಚೀಲಗಳಲ್ಲಿ ಈ ಮಾತ್ರೆಗಳನ್ನು ಪತ್ತೆ ಹಚ್ಚಿದ ನಾಗರಿಕರ ನಾಲ್ಕು ಹೇಳಿಕೆಗಳನ್ನು ತಾನೀಗಾಗಲೇ ದಾಖಲಿಸಿಕೊಂಡಿದ್ದೇನೆ ಎಂದು ತಿಳಿಸಿರುವ ಮಾಧ್ಯಮ ಕಚೇರಿಯು, ಕೆಲವು ಮಾದಕ ದ್ರವ್ಯಗಳನ್ನು ಪುಡಿ ಮಾಡಿ ಅಥವಾ ನೇರವಾಗಿ ಹಿಟ್ಟಿನಲ್ಲಿ ಬೆರೆಸಿರುವ ಸಾಧ್ಯತೆಯಿದೆ ಎಂದು ಸೂಚಿಸಿದ್ದು, ಸಾರ್ವಜನಿಕ ಆರೋಗ್ಯವನ್ನು ಅಪಾಯಕ್ಕೀಡು ಮಾಡುವ ಸಂಘಟಿತ ಯತ್ನದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಗಮನಾರ್ಹವಾಗಿ ಆಕ್ಸಿಕೊಡೋನ್ ಅನ್ನು ಓಪಿಯಾಡ್ ಚಿಕಿತ್ಸೆ ಅಗತ್ಯವಿರುವ ತೀವ್ರ ನೋವನ್ನು ನಿವಾರಿಸಲು, ಇತರ ನೋವು ನಿವಾರಕಗಳು ಸಾಕಷ್ಟು ಕೆಲಸ ಮಾಡದಿದ್ದಾಗ,ಬಳಸಲಾಗುತ್ತದೆ.

‘ಮಾದಕ ದ್ರವ್ಯ ವ್ಯಸನವನ್ನು ಹರಡುವ ಮತ್ತು ಫೆಲೆಸ್ತೀನಿ ಸಮಾಜವನ್ನು ಒಳಗಿನಿಂದ ನಾಶ ಮಾಡುವ ಈ ಘೋರ ಅಪರಾಧಕ್ಕೆ ಇಸ್ರೇಲಿ ಆಕ್ರಮಣವು ಸಂಪೂರ್ಣ ಹೊಣೆಗಾರನಾಗಿದೆ. ಇದು ನಮ್ಮ ಫೆಲೆಸ್ತೀನಿ ಜನರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಇನ್ನಷ್ಟು ಹೆಚ್ಚಿಸುವ ವ್ಯವಸ್ಥಿತ ನೀತಿಯ ಭಾಗವಾಗಿದೆ’ ಎಂದು ಮಾಧ್ಯಮ ಕಚೇರಿಯು ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ನಾಗರಿಕರ ವಿರುದ್ಧದ ಕೊಳಕು ಯುದ್ಧದಲ್ಲಿ ಇಸ್ರೇಲ್ ಮಾದಕ ದ್ರವ್ಯಗಳನ್ನು ‘ಮೃದು ಅಸ್ತ್ರ’ವನ್ನಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಹೇಳಿಕೆಯು,ಈ ತಂತ್ರವನ್ನು ಯುದ್ಧಾಪರಾಧ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ನೇರ ಉಲ್ಲಂಘನೆಗೆ ಹೋಲಿಸಿದೆ.

ಇದು ಕೇವಲ ಮಾನವೀಯ ನೆರವು ಭ್ರಷ್ಟಗೊಳ್ಳುತ್ತಿರುವ ಬಗ್ಗೆ ಅಲ್ಲ. ಇದು ನಮ್ಮ ಜನರ ಮನಸ್ಸು ಮತ್ತು ಶರೀರಗಳ ಮೇಲೆ ಉದ್ದೇಶಪೂರ್ವಕ ದಾಳಿಯ ಕುರಿತಾಗಿದೆ. ಜಗತ್ತು ಇದನ್ನು ಗಮನಿಸಬೇಕು ಮತ್ತು ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಗಾಝಾ ಮಾಧ್ಯಮ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಸದ್ರಿ ನೆರವನ್ನು ಅಮೆರಿಕವು ನಡೆಸುತ್ತಿರುವ ವಿತರಣಾ ಕೇಂದ್ರಗಳ ಮೂಲಕ ಪೂರೈಸಲಾಗುತ್ತಿರುವುದರಿಂದ ಈ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಪ್ರಸ್ತುತ ಗಾಝಾವನ್ನು ಪ್ರವೇಶಿಸುತ್ತಿರುವ ಮಾನವೀಯ ನೆರವು ಫೆಲೆಸ್ತೀನ್ ಎನ್‌ಕ್ಲೇವ್‌ನ ಮೂಲಭೂತ ಅಗತ್ಯಗಳ ಶೇ.1ಕ್ಕೂ ಕಡಿಮೆಯಿದೆ ಎಂದು ಫೆಲೆಸ್ತೀನಿ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಈಗ ಸೃಷ್ಟಿಯಾಗಿರುವ ಹೊಸ ವಿವಾದವು ಅಂತರರಾಷ್ಟ್ರೀಯ ಪರಿಹಾರ ಪ್ರಯತ್ನಗಳ ಮೇಲಿನ ನಂಬಿಕೆ ಇನ್ನಷ್ಟು ಕುಸಿಯುವ ಬೆದರಿಕೆಯೊಡ್ಡಿದೆ.

ಈ ಆರೋಪಗಳಿಗೆ ಇಸ್ರೇಲ್ ಸರಕಾರವು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದಾಗ್ಯೂ ಇಸ್ರೇಲಿ ಮಾಧ್ಯಮಗಳು ಸಾಂಪ್ರದಾಯಿಕ ವಿಶ್ವಸಂಸ್ಥೆ ನೇತೃತ್ವದ ಪೂರೈಕೆ ಕೇಂದ್ರಗಳನ್ನು ತಪ್ಪಿಸಿ ಪರ್ಯಾಯ ನೆರವು ವಿತರಣೆ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಗಳ ಬಗ್ಗೆ ಇತ್ತೀಚಿಗೆ ವರದಿ ಮಾಡಿದ್ದವು. ಇದನ್ನು ವಿಶ್ವಸಂಸ್ಥೆ ಮತ್ತು ಜಾಗತಿಕ ಮಾನವೀಯ ಸಂಸ್ಥೆಗಳು ಬಲವಾಗಿ ವಿರೋಧಿಸಿವೆ.

ಈ ನಡುವೆ ಮೇ 27ರಿಂದೀಚಿಗೆ ನೆರವು ಕೇಂದ್ರಗಳು ಮತ್ತು ಆಹಾರ ಪೂರೈಕೆ ಟ್ರಕ್‌ಗಳ ಮಾರ್ಗಗಳ ಸಮೀಪ ಇಸ್ರೇಲಿ ಪಡೆಗಳ ದಾಳಿಗಳಲ್ಲಿ ಕನಿಷ್ಠ 549 ಫೆಲೆಸ್ತೀನಿಗಳು ಸಾವನ್ನಪ್ಪಿದ್ದು,4,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದರೊಂದಿಗೆ ಗಾಝಾ ಸಂಘರ್ಷದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 56,300ನ್ನು ದಾಟಿದ್ದು,ಈ ಪೈಕಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News