×
Ad

ಫೆಲೆಸ್ತೀನೀಯರ ಸಾಮೂಹಿಕ ಕಣ್ಗಾವಲಿಗೆ ಇಸ್ರೇಲ್‍ನಿಂದ ಮೈಕ್ರೋಸಾಫ್ಟ್ ತಂತ್ರಜ್ಞಾನ

ಬಳಕೆಗೆ ನಿರ್ಬಂಧ

Update: 2025-09-26 20:34 IST

ಮೈಕ್ರೋಸಾಫ್ಟ್ ತಂತ್ರಜ್ಞಾನ

ವಾಷಿಂಗ್ಟನ್, ಸೆ.26: ಗಾಝಾ ಮತ್ತು ಪಶ್ಚಿಮದಂಡೆಯಲ್ಲಿ ಲಕ್ಷಾಂತರ ಫೆಲೆಸ್ತೀನ್ ನಾಗರಿಕರು ಮಾಡಿದ ಫೋನ್ ಕರೆಗಳನ್ನು ಸಂಗ್ರಹಿಸುವ ಪ್ರಬಲ ಕಣ್ಗಾವಲು ವ್ಯವಸ್ಥೆಯನ್ನು ನಿರ್ವಹಿಸಲು ಬಳಸಲಾಗುತ್ತಿದ್ದ ತಂತ್ರಜ್ಞಾನಕ್ಕೆ ಇಸ್ರೇಲ್‌ ಮಿಲಿಟರಿಯ ಪ್ರವೇಶವನ್ನು ಮೈಕ್ರೋಸಾಫ್ಟ್ ಕೊನೆಗೊಳಿಸಿದೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ.

ಇಸ್ರೇಲಿ ಮಿಲಿಟರಿಯ ವಿಶಿಷ್ಟ ಪತ್ತೇದಾರಿ ಏಜೆನ್ಸಿ `ಯುನಿಟ್ 8200' ಕಣ್ಗಾವಲು ಡೇಟಾವನ್ನು ತನ್ನ ಅಝೂರ್ ಕ್ಲೌಡ್ ವ್ಯವಸ್ಥೆಯಲ್ಲಿ ಸಂಗ್ರಹಿಸುವ ಮೂಲಕ ಕಂಪೆನಿಯ ಸೇವಾ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಕಳೆದ ವಾರ ಮೈಕ್ರೋಸಾಫ್ಟ್ ಇಸ್ರೇಲಿ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಸಾಮೂಹಿಕ ಕಣ್ಗಾವಲು ಕಾರ್ಯಕ್ರಮದಲ್ಲಿ ಫೆಲೆಸ್ತೀನಿಯನ್ ಸಂವಹನಗಳ ನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಅಝೂರ್ ಕ್ಲೌಡ್ ವೇದಿಕೆಯನ್ನು ಬಳಸಲಾಗುತ್ತಿದೆ ಎಂದು ತನಿಖಾ ವರದಿಯೊಂದು ಹೇಳಿತ್ತು.

ವರದಿಯ ಹಿನ್ನೆಲೆಯಲ್ಲಿ `ಯುನಿಟ 8200' ಜೊತೆಗಿನ ತನ್ನ ಸಂಬಂಧವನ್ನು ಪರಿಶೀಲಿಸಲು ಮೈಕ್ರೋಸಾಫ್ಟ್ ಬಾಹ್ಯ ತನಿಖೆಗೆ ಆದೇಶಿಸಿತ್ತು ಮತ್ತು ತನಿಖಾ ವರದಿಯನ್ನು ಗಮನಿಸಿ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ ಎಂದು ಮೈಕ್ರೋಸಾಫ್ಟ್ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಗಾಝಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸಿದೆ ಎಂಬ ವಿಶ್ವಸಂಸ್ಥೆಯ ಇತ್ತೀಚಿನ ವರದಿಯ ಬಳಿಕ ಈ ಬೆಳವಣಿಗೆ ನಡೆದಿದೆ. ಇಸ್ರೇಲ್‍ನ ರಕ್ಷಣಾ ಸಚಿವಾಲಯದೊಳಗಿನ ಯುನಿಟ್‍ಗೆ ಕ್ಲೌಡ್ ಸ್ಟೋರೇಜ್ ಮತ್ತು ಎಐ ಸೇವೆಗಳು ಸೇರಿದಂತೆ ಸೇವೆಗಳ ಶ್ರೇಣಿಯನ್ನು ಕಂಪೆನಿ ನಿಲ್ಲಿಸಿದೆ ಮತ್ತು ನಿಷ್ಕ್ರಿಯಗೊಳಿಸಿದೆ ಎಂದು ಮೈಕ್ರೋಸಾಫ್ಟ್‌ನ ಅಧ್ಯಕ್ಷ ಬ್ರಾಡ್ ಸ್ಮಿತ್ ಗುರುವಾರ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News