×
Ad

ಪಶ್ಚಿಮದಂಡೆಯಲ್ಲಿ ಇಸ್ರೇಲಿ ಪಡೆಗಳ ಕಾರ್ಯಾಚರಣೆ | ಸ್ಥಳಾಂತರಗೊಳ್ಳುವಂತೆ ಸ್ಥಳೀಯರಿಗೆ ಸೂಚನೆ

Update: 2025-01-23 20:48 IST

PC : NDTV 

ರಮಲ್ಲ: ಗಾಝಾದಲ್ಲಿ ಕದನ ವಿರಾಮ ಜಾರಿಗೊಂಡ ಎರಡನೇ ದಿನವಾದ ಮಂಗಳವಾರದಿಂದ ಪಶ್ಚಿಮದಂಡೆಯಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಿದ್ದು ತಕ್ಷಣ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತಿದೆ ಎಂದು ವರದಿಯಾಗಿದೆ.

ಇಸ್ರೇಲ್ ಸೇನೆ ಡ್ರೋನ್‍ಗಳಲ್ಲಿ ಹಾಗೂ ಸೇನಾ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಸ್ಥಳೀಯರಿಗೆ ಸ್ಥಳಾಂತರಗೊಳ್ಳುವಂತೆ ಆದೇಶಿಸುತ್ತಿದೆ. ಇದರಿಂದ ಆತಂಕಗೊಂಡ ನೂರಾರು ಫೆಲೆಸ್ತೀನೀಯರು ಈಗಾಗಲೇ ಪಶ್ಚಿಮದಂಡೆಯ ನಿರಾಶ್ರಿತರ ಶಿಬಿರವನ್ನು ತೊರೆದು ಸುರಕ್ಷಿತ ಪ್ರದೇಶದತ್ತ ತೆರಳುತ್ತಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮದಂಡೆಯಲ್ಲಿ ಇರುವ ನಿರಾಶ್ರಿತರ ಶಿಬಿರ ಹಾಗೂ ಜೆನಿನ್ ನಗರದಲ್ಲಿ ಇರುವ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರನ್ನು ಬೇರುಸಹಿತ ಕಿತ್ತುಹಾಕುವುದು ಮಂಗಳವಾರ ಆರಂಭಿಸಲಾದ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಎರಡು ದಿನದ ಕಾರ್ಯಾಚರಣೆಯಲ್ಲಿ ಕನಿಷ್ಠ 12 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಫೆಲೆಸ್ತೀನಿಯನ್ ಆರೋಗ್ಯ ಇಲಾಖೆ ಹೇಳಿದೆ.

ಪಶ್ಚಿಮದಂಡೆಯಲ್ಲಿ ಇಸ್ರೇಲಿ ಮಿಲಿಟರಿ ಬೃಹತ್ ದಾಳಿ ಆರಂಭಿಸಿದ ಹಿನ್ನೆಲೆಯಲ್ಲಿ ಶಿಬಿರದ ನಿವಾಸಿಗಳು ಆತಂಕಗೊಂಡಿದ್ದು ನೂರಾರು ಮಂದಿ ಈಗಾಗಲೇ ಶಿಬಿರ ತೊರೆದಿದ್ದಾರೆ. ಗುಂಡಿನ ಸದ್ದು, ಸ್ಫೋಟಗಳು ಜೆನಿನ್ ನಗರವನ್ನು ನಡುಗಿಸಿವೆ ಎಂದು ಜೆನಿನ್ ನಗರದ ಗವರ್ನರ್ ಅಬು ಅಲ್-ರಬ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜೆನಿನ್‍ನಲ್ಲಿನ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವ ಆದೇಶದ ಬಗ್ಗೆ ಇದುವರೆಗೆ ಮಾಹಿತಿಯಿಲ್ಲ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ. 2023ರ ಅಕ್ಟೋಬರ್ ತಿಂಗಳಿನಲ್ಲಿ ಗಾಝಾದಲ್ಲಿ ಯುದ್ಧ ಉಲ್ಬಣಗೊಂಡ ಬಳಿಕ ಪಶ್ಚಿಮದಂಡೆ ಪ್ರದೇಶದಿಂದ ಇಸ್ರೇಲ್‍ ನತ್ತ ಸಾವಿರಾರು ದಾಳಿಯ ಪ್ರಯತ್ನಗಳು ನಡೆದಿವೆ. ಇದೀಗ ನಡೆಯುತ್ತಿರುವ ಕಾರ್ಯಾಚರಣೆಯು ಪಶ್ಚಿಮದಂಡೆಯಲ್ಲಿ ಹೋರಾಟಗಾರರ ವಿರುದ್ಧದ ವ್ಯಾಪಕ ಅಭಿಯಾನದ ಭಾಗವಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.

` ಫೆಲೆಸ್ತೀನಿಯನ್ ಹೋರಾಟಗಾರರ ಭದ್ರಕೋಟೆ ಎನಿಸಿಕೊಂಡಿರುವ ಪಶ್ಚಿಮದಂಡೆಯಲ್ಲಿ ಆರಂಭಿಸಲಾದ `ಆಪರೇಷನ್ ಕಬ್ಬಿಣದ ಗೋಡೆ'ಯು ಹೋರಾಟಗಾರರನ್ನು ನಿರ್ಮೂಲನೆ ಮಾಡುತ್ತದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

*ಸೌದಿ ಅರೆಬಿಯಾ ಖಂಡನೆ

ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ಪ್ರದೇಶದಲ್ಲಿ ಇಸ್ರೇಲಿ ಪಡೆಗಳ ದಾಳಿಯನ್ನು ಸೌದಿ ಅರೆಬಿಯಾ ಖಂಡಿಸಿರುವುದಾಗಿ `ಸೌದಿ ಪ್ರೆಸ್ ಏಜೆನ್ಸಿ' ಗುರುವಾರ ವರದಿ ಮಾಡಿದೆ.

ಸಂಬಂಧಿತ ಅಂತರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳ ಇಸ್ರೇಲಿ ಉಲ್ಲಂಘನೆಯನ್ನು ತಡೆಯುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂಬ ಆಗ್ರಹವನ್ನು ಸೌದಿ ಪುನರುಚ್ಚರಿಸುತ್ತದೆ ಎಂದು ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆ ಹೇಳಿದೆ. ಈ ಉಲ್ಲಂಘನೆಗಳ ಮುಂದುವರಿಕೆಯು ಹೋರಾಟ ಮತ್ತು ಅವ್ಯವಸ್ಥೆ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳಿಗೆ ಮರಳಲು ಕಾರಣವಾಗಬಹುದು. ನಾಗರಿಕರ ಭದ್ರತೆ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಪ್ರದೇಶದಲ್ಲಿ ಶಾಂತಿಯ ಸಾಧ್ಯತೆಯನ್ನು ಹಾಳು ಮಾಡುತ್ತದೆ ಎಂದು ಸೌದಿ ಅರೆಬಿಯಾ ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News