ಲೆಬನಾನ್ ನಲ್ಲಿ ಹಿಝ್ಬುಲ್ಲಾ ಸದಸ್ಯರ ಮೇಲೆ ಇಸ್ರೇಲ್ ಸೇನೆಯಿಂದ ವಾಯು ದಾಳಿ
Update: 2025-11-06 20:41 IST
Screengrab : Al Jazeera English \ youtube
ಟೆಲ್ ಅವೀವ್, ನ. 6: ಹಿಝ್ಬುಲ್ಲಾದ ನಿರ್ಮಾಣ ಘಟಕದ ಸದಸ್ಯರನ್ನು ಗುರಿಯಾಗಿಸಿ ದಕ್ಷಿಣ ಲೆಬನಾನ್ ನ ತೈರ್ ಪ್ರದೇಶದಲ್ಲಿ ವಾಯು ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಗುರುವಾರ ತಿಳಿಸಿದೆ. ಹಿಝ್ಬುಲ್ಲಾದ ನಿರ್ಮಾಣ ಘಟಕದ ಸದಸ್ಯರು ಸೇನಾ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅದು ಆರೋಪಿಸಿದೆ.
‘‘ಇಸ್ರೇಲ್ ದೇಶದ ಭೂಭಾಗಕ್ಕೆ ಎದುರಾಗುವ ಯಾವುದೇ ಬೆದರಿಕೆಯನ್ನು ನಿವಾರಿಸಲು ಇಸ್ರೇಲಿ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸುತ್ತವೆ”, ಎಂದು ಇಸ್ರೇಲಿ ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ದಕ್ಷಿಣ ಲೆಬನಾನ್ ನ ತೈರ್ ಜಿಲ್ಲೆಯಲ್ಲಿರುವ ತೌರ ಮತ್ತು ಅಬ್ಬಾಸಿಯ ಪಟ್ಟಣಗಳ ಸಮೀಪ ಇಸ್ರೇಲ್ ವಾಯುಪಡೆಯು ದಾಳಿ ನಡೆಸಿದೆ ಎಂಬುದಾಗಿ ಲೆಬನಾನ್ ನ ನ್ಯಾಶನಲ್ ನ್ಯೂಸ್ ಏಜನ್ಸಿ ವರದಿ ಮಾಡಿದ ಬಳಿಕ ಇಸ್ರೇಲ್ ಸೇನೆಯ ಈ ಪ್ರಕಟನೆ ಹೊರಬಿದ್ದಿದೆ. ದಾಳಿಯಲ್ಲಿ ಆಗಿರಬಹುದಾದ ಸಾವು-ನೋವುಗಳ ಬಗ್ಗೆ ಅದು ಯಾವುದೇ ಮಾಹಿತಿ ನೀಡಿಲ್ಲ.